ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ :ತಾಲೂಕಿನ ಮಿರ್ಜಾನ್ ಭಾಗದಲ್ಲಿ ಅಕ್ರಮ ಕೆಂಪು ಚಿರೆಕಲ್ಲು ಗಣಿಗಾರಿಕೆ ನಿರಂತರವಾಗಿ ನಡೆಯುತ್ತಲೇ ಇದೆ ಎಂದು ಸ್ಥಳೀಯರು ಪದೇ ಪದೇ ದೂರುತ್ತಲೇ ಇದ್ದಾರೆ. ಆದರೆ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ದಿವ್ಯ ಮೌನ ವಹಿಸಿದ್ದಾರೆ. ಇದರ ಹಿಂದಿನ ರಹಸ್ಯವೇನು ಎಂದು ಸ್ಥಳೀಯರು ಪ್ರಶ್ನಿಸಲಾರಂಭಿಸಿದ್ದಾರೆ.
ಈಗಾಗಲೇ ಜಿಲ್ಲೆಯಾದ್ಯಂತ ಸ್ಥಳೀಯಾಡಳಿತ, ತಾಲೂಕಾಡಳಿತ, ಜಿಲ್ಲಾಡಳಿತ, ಗಣಿ ಮತ್ತು ವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಇಲಾಖೆ ಇವರೆಲ್ಲ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮರಳುಗಾರಿಕೆಯನ್ನು ಸಂಪೂರ್ಣ ನಿಲ್ಲಿಸಿದ್ದಾರೆ. ಆದರೆ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ತಡೆಯಲು ಬಹುತೇಕ ಎಲ್ಲಾ ಇಲಾಖೆಗಳು ಮೀನಮೇಷ ಎಣಿಸುತ್ತಿವೆ. ಯಾಕೆ ಹೀಗೆ?
ಮನೆ ಕಟ್ಟುವವರಿಗೆ ಕಲ್ಲೂ ಬೇಕು, ಮರಳೂ (ರೇತಿ) ಬೇಕು. ಆದರೆ ಈಗ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಆದರೆ ಮರಳನ್ನು ಸ್ಥಗಿತಗೊಳಿಸಲಾಗಿದೆ. ಮರಳನ್ನು ಹಿಡಿಯುವಾಗ ಎಲ್ಲ ಇಲಾಖೆಗಳು ತಾ ಮುಂದು, ನಾ ಮುಂದು ಎಂದು ಧಾವಿಸುತ್ತಿದ್ದರು. ಆದರೆ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂದು ಗ್ರಾಮಸ್ಥರು ವಿವಿಧ ಇಲಾಖೆಗಳಿಗೆ ಮಾಹಿತಿ ನೀಡಿದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮೌನ ವೃತದಲ್ಲಿರುವವರಂತೆ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.
ಇದು ಜನಪ್ರತಿನಿಧಿಯೊಬ್ಬರ ಕಲ್ಲು ಕ್ವಾರಿ,ಇಲ್ಲಿ ಖುದ್ದು ಜನಪ್ರತಿನಿಧಿಯೇ ಹಣ ವಿನಿಯೋಗಿಸಿದ್ದಾರೆ. ಹಾಗಾಗಿಯೇ ಅಧಿಕಾರಿಗಳು ಇತ್ತ ನೋಡಿಯೂ ನೋಡದವರಂತೆ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಾರಾದರೂ ಇದಕ್ಕೆ ನಿಖರ ಆಧಾರಗಳಿಲ್ಲ. ಯಾವುದಕ್ಕೂ ಅಧಿಕಾರಿಗಳು ಮೌನ ಮುರಿದರೆ ಗ್ರಾಮಸ್ಥರ ಅನುಮಾನದ ಪ್ರಶ್ನೆಗಳಿಗೆ ಉತ್ತರ ಸಿಗಬಹುದು.
ಗಣಿ ಇಲಾಖೆ “ಗಪ್ ಚುಪ್”
ಜಿಲ್ಲೆಯ ಎಲ್ಲೇ ಅಕ್ರಮ ಮರಳು, ಕಲ್ಲು ಗಣಿಗಾರಿಕೆ ನಡೆದರೂ ತಕ್ಷಣ ಕಾರವಾರದ ಗಣಿ ಇಲಾಖೆಯ ಅಧಿಕಾರಿಗಳು ಪ್ರತ್ಯಕ್ಷರಾಗುತ್ತಿದ್ದರು. ಗಣಿ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು ಜಿಲ್ಲಾದ್ಯಂತ ದಾಳಿ ನಡೆಸಿ ಜಿಲ್ಲೆಯ ಜನರಲ್ಲಿ ಅಚ್ಚರಿ ಮೂಡಿಸುವುದರ ಜೊತೆಗೆ ನೈಸರ್ಗಿಕ ಸಂಪತ್ತು ಉಳಿಸುವ ಹೋರಾಟಗಾರರ ಪಾಲಿಗೆ “ಆಶಾಕಿರಣ”ವೂ ಆಗಿದ್ದರು. ಆದರೆ ಮಿರ್ಜಾನದ ಅಕ್ರಮ ಕಲ್ಲು ಗಣಿಗಾರಿಕೆ ವಿಚಾರದಲ್ಲಿ ಮಾತ್ರ ಈ ಮಹಿಳಾ ಅಧಿಕಾರಿ ಕೂಡ ಗಪ್ ಚುಪ್ ಆಗಿರುವುದು ಸ್ಥಳೀಯರಲ್ಲೂ, ಹೋರಾಟಗಾರರಲ್ಲೂ ಆಶ್ಚರ್ಯ ಸಹಿತ ಅನುಮಾನ ಮೂಡಿಸಿದೆ. (…ಮುಂದುವರೆಯಲಿದೆ…….)
ಗಮನಿಸಿ