ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಈಗಿನ ಜಂಜಾಟದ, ಕಷ್ಟದ ಬದುಕಿನಲ್ಲೂ ಆಗಾಗ ಕೋಮುಗಲಭೆ, ಕೋಮು ಸಂಘರ್ಷ, ಅನ್ಯಕೋಮು ಹುಡುಗರ ಮಾರಾಮಾರಿ ಮುಂತಾದ ದುರ್ಘಟನೆಗಳ ಬಗ್ಗೆ ಅಲ್ಲಲ್ಲಿ ಕೇಳುತಿರುತ್ತೇವೆ. ಇಂತಹ ಸಂದರ್ಭ ಮನೆಯ ಹಿರಿಯರು ತಮ್ಮ ಕಾಲದ ಹಿಂದು-ಮುಸ್ಲಿಮರ ಸಂಬಂಧಗಳ ಗತವೈಭವವನ್ನು ನೆನೆಯುತ್ತಾರೆ. ಇಂತದ್ದೇ ಸೌಹಾರ್ದ, ಸಹಬಾಳ್ವೆಯ ಜೀವನ ಪಾಠವೊಂದು ಕುಮಟಾ ಪಟ್ಟಣದ ಗುಡಿಗಾರಗಲ್ಲಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಭವಿಷ್ಯದಲ್ಲಿ ಭಾರತ ಮತ್ತೆ ಪ್ರಜ್ವಲಿಸುತ್ತದೆ ಎನ್ನುವುದಕ್ಕೆ ಹಿಂದು-ಮುಸ್ಲಿಮರು ಪರಸ್ಪರ ಸತ್ಕರಿಸಿಕೊಂಡ ಘಟನೆ ಸಾಕ್ಷಿಯಾಗಿದೆ. ಕುಮಟಾ ಪಟ್ಟಣದಲ್ಲಿ `ಗುಡಿಗಾರಗಲ್ಲಿ ಗಣೇಶೋತ್ಸವ ಸಮಿತಿ”ಯದ್ದು ವಿಶೇಷ ಛಾಪು. ಈ ಹಿಂದಿನಿಂದಲೂ ಇಲ್ಲಿ ಯಾವುದೇ ಜಾತಿ, ಧರ್ಮದ ಭೇದವಿಲ್ಲದೇ ಬಾಲಗಂಗಾಧರನಾಥ ತಿಲಕರು ಹೇಳಿದಂತೆ ಎಲ್ಲರೂ ಒಗ್ಗಟ್ಟಾಗಿ ಸಂಭ್ರಮದಿಂದ “ಗಣೇಶ ಚವತಿ” ಹಬ್ಬವನ್ನು ಆಚರಿಸುತ್ತಿದ್ದರು.

ಗುಡಿಗಾರಗಲ್ಲಿಯಲ್ಲಿ ಗಣೇಶೋತ್ಸವವನ್ನು 10 ದಿನಗಳ ಕಾಲ ಪೂಜಿಸಲ್ಪಡುತ್ತಿದ್ದು, ಸೆಪ್ಟೆಂಬರ್ 16, ಸೋಮವಾರ ಮಂಗಲಮೂರ್ತಿಯನ್ನು ನಿಯಮದಂತೆ ಸಾಂಪ್ರದಾಯಿಕವಾಗಿ ವಿಸರ್ಜಿಸುವುದೆಂದು ತೀರ್ಮಾನಿಸಲಾಗಿತ್ತು.ಆದರೆ ಅದೇ ದಿನ ಮುಸ್ಲಿಮರ “ಈದ್ ಮಿಲಾದ್” ಹಬ್ಬ ಕೂಡ ಇರುವ ಕಾರಣ ಕಳೆದ ಅನೇಕ ವರ್ಷ ಮಾಡಿರುವಂತೆ ಈ ವರ್ಷವೂ ಮುಸ್ಲಿಮರು ವ್ಯವಸ್ಥಿತವಾಗಿ ಮೆರವಣಿಗೆ ಸಂಘಟಿಸಿದ್ದರು.

ಕುಮಟಾದ ಹಳಕಾರದಿಂದ ಹೊರಟ ಮುಸ್ಲಿಮರ ಈದ್ ಮೆರವಣಿಗೆ ಗುಡಿಗಾರಗಲ್ಲಿ ಪ್ರವೇಶಿಸುತ್ತಿದ್ದ ಹಾಗೆ ಗುಡಿಗಾರಗಲ್ಲಿ ಮತ್ತು ದೇವರಹಕ್ಕಲದ ಸಮಾನಮನಸ್ಕರ ಗೆಳೆಯರ ಬಳಗದವರು ಸೇರಿಕೊಂಡು ಮುಸ್ಲಿಂ ಸಹೋದರರಿಗೆ ಜಹಾಂಗೀರ್ ವಿತರಿಸಿ ಅವರ ಹಬ್ಬದ ಸಂಭ್ರಮ ಇಮ್ಮಡಿಗೊಳಿಸುವುದರ ಜೊತೆಗೆ “ನಮ್ಮಲ್ಲಿ ಯಾವುದೇ ಧರ್ಮದ ಹಂಗಿಲ್ಲ, ಜಾತಿ ಭೇದವಿಲ್ಲ, ನಾವೆಲ್ಲ ಈ ದೇಶದ ಮಕ್ಕಳು, ನಾವೆಲ್ಲ ಒಂದಾದರೆ ಮಾತ್ರ ಈ ದೇಶ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ” ಎಂಬ ಸಂದೇಶ ಸಾರಿದ್ದಾರೆ.

ಅದೇ ಸೋಮವಾರ ಸಂಜೆ ಗುಡಿಗಾರಗಲ್ಲಿ ಗಣೇಶನ ವಿಸರ್ಜನೆ ಕೂಡ ಇದೆ ಎಂದು ಅರಿತುಕೊಂಡ ದೇವರಹಕ್ಕಲದ ಸಿರಿಲ್ ರೊಡ್ರಗೀಸ್ ಮತ್ತು ಕುದ್ದುಸ್ ಖಾಸಿಮ್ ಬೇಗ್ ಮತ್ತಿತರ ಸ್ನೇಹಿತರು ಸೇರಿ ಮಂಗಲಮೂರ್ತಿಯ ಮೆರವಣಿಗೆ ಸಂದರ್ಭ ನೆರೆದ ಸಾವಿರಾರು ಮಂದಿಗೆ ಬಿಸಿ, ಬಿಸಿ ಸಮೋಸ ನೀಡುವ ಮೂಲಕ ನಾವು ಕೂಡ ನಿಮ್ಮ ಹಬ್ಬದ ಸಂಭ್ರಮದಲ್ಲಿ ಭಾಗಿ ಎಂಬ ಸಂದೇಶ ರವಾನಿಸಿದ್ದಾರೆ.

ಈ ಕುರಿತು ಗುಡಿಗಾರಗಲ್ಲಿ ಗಣೇಶೋತ್ಸವ ಸಮಿತಿ”ಯ ಮಾಜಿ ಅಧ್ಯಕ್ಷ, ದೇವರಹಕ್ಕಲದ ರಾಜೇಶ (ರಾಜು) ನಾಯ್ಕ ಪ್ರತಿಕ್ರಿಯಿಸಿದ್ದು, “ನಾವೀಗ ಎಲ್ಲರ ಸಹಾಯ, ಸಹಕಾರ ಪಡೆದು ವಿಜೃಂಭಣೆಯಿಂದ ಗಣೇಶ ಚತುರ್ಥಿ ಹಬ್ಬ ಮುಗಿಸಿದ್ದೇವೆ. ಕಾಕತಾಳೀಯ ಎಂಬಂತೆ ಗುಡಿಗಾರಗಲ್ಲಿ ಗಣೇಶನ ವಿಸರ್ಜನೆಯ ದಿನವೇ ಮುಸ್ಲಿಂ ಸಹೋದರರ ಈದ್ ಮಿಲಾದ್ ಕೂಡ ಇದ್ದು, ಅವರು ಮೆರವಣಿಗೆಯಲ್ಲಿ ನಮ್ಮ ಗುಡಿಗಾರಗಲ್ಲಿ ರಸ್ತೆಗೆ ಬಂದಾಗ ನಾವು ಸಮಾನ ಮನಸ್ಕರನೇಕರು ಸೇರಿ ಮುಸ್ಲಿಂ ಸಹೋದರರಿಗೆ ಸಿಹಿ ನೀಡಿದ್ದೇವೆ.

ಈ ಸತ್ಕಾರ್ಯದಲ್ಲಿ ಹೆಸರು ಹೇಳಲಿಚ್ಚಿಸದ ಅನೇಕ ಮಹನೀಯರು ಕೈಜೋಡಿಸಿದ್ದಾರೆ. ಮುಸ್ಲಿಂ ಸಹೋದರರೊಂದಿಗೆ ನಾವೆಲ್ಲ ಸೇರಿ ಸಂಭ್ರಮ ಪಡುವುದರ ಜೊತೆಗೆ ಸಹಕಾರ, ಸೌಹಾರ್ದತೆ, ಸಹಬಾಳ್ವೆ ಮತ್ತು ಸಹೋದರತೆಯ ಸಂದೇಶವನ್ನು ಮತ್ತಷ್ಟು ಗಟ್ಟಿಗೊಳಿಸುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ನಮ್ಮ ಬಾಲ್ಯದ ದಿನಗಳಿಂದಲೂ ನಾವು ಗುಡಿಗಾರಗಲ್ಲಿ ಗಣೇಶೋತ್ಸವ ಸಮಿತಿಯ ಕಾರ್ಯ ಚಟುವಟಿಕೆಗಳನ್ನು ನೋಡಿ ಬೆಳೆದಿದ್ದೇವೆ.

ಹಿಂದೆ ಮುಸ್ಲಿಂ ಸಹೋದರರಾದ ದಿವಂಗತ ಅಸ್ಲಾಂ, ನಿಝಾಮ್ ಹಾಗೂ ಕ್ರೈಸ್ತ ಸಹೋದರರಾದ ಕುಮಟಾದ ಹಿರಿಯ ಆಟೋ ಚಾಲಕ ಜೈಸಂತಣ್ಣ, ಎಲ್ಲರ ಪ್ರೀತಿಯ ಎನ್ನ ಎಂದೇ ಖ್ಯಾತಿಯಾಗಿದ್ದ ದಿವಂಗತ ಎರ್ನೆಸ್ ಮತ್ತು ಇನ್ನೂ ಅನೇಕರು ಯಾವುದೇ ಜಾತಿ, ಧರ್ಮ, ಭೇದವಿಲ್ಲದೇ ಈ ಸಮಿತಿಯಲ್ಲಿ ಹಗಲು ರಾತ್ರಿ ದುಡಿದಿದ್ದನ್ನು ನಾವು ನೋಡಿದ್ದೇವೆ. ಹಾಗಾಗಿ ಮೊನ್ನೆಯ ಸೌಹಾರ್ದತೆಯ ಈ ಘಟನೆಯನ್ನು ನಾವು “ಗತವೈಭವ” ಎಂದೇ ಬಣ್ಣಿಸುತ್ತೇವೆ” ಎಂದು ತಿಳಿಸಿದ್ದಾರೆ.

ಗಮನಿಸಿ