suddibindu.in
ಕುಮಟಾ : ಅಂತೂ ಕೊನೆಯ ಒಂದು ವರ್ಷದ ಅವಧಿಗೆ ಸ್ಥಳೀಯಾಡಳಿತ ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ ಸರ್ಕಾರವು ಮೀಸಲಾತಿ ಪ್ರಕಟಿಸಿದ್ದು, ಈ ಮೀಸಲಾತಿಯಂತೆ ಕುಮಟಾ ಪುರಸಭೆಯ ಅಧ್ಯಕ್ಷ ಸ್ಥಾನ “ಸಾಮಾನ್ಯ ಮಹಿಳೆ”ಗೆ ಎಂದು ಘೋಷಿತವಾಗಿದೆ. ಇದೀಗ ಅಧ್ಯಕ್ಷೆಯಾಗಲು ಬಿಜೆಪಿಯ ಮಹಿಳಾಮಣಿಗಳಲ್ಲಿ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.
ಇಂದು (ಗುರುವಾರ) ಸಂಜೆ 4 ಗಂಟೆಗೆ ಬಿಜೆಪಿ ಪಕ್ಷದ ಸಭೆ ಇದ್ದು, ಕುಮಟಾ ಪುರಸಭೆಯ ಅಧ್ಯಕ್ಷೆ ಆಯ್ಕೆ ಇಂದಿನ ಪ್ರಮುಖ ವಿಚಾರವಾಗಲಿದೆ. ಈಗಾಗಲೇ ಕುಮಟಾ ಪುರಸಭೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ ಹೆಚ್ಚಿದ್ದು, 23 ವಾರ್ಡಿನಲ್ಲಿ 16 ಸದಸ್ಯರು ಬಿಜೆಪಿಗರಿದ್ದಾರೆ. ಬಿಜೆಪಿಯ ಈ 16ರಲ್ಲಿ 8 ಮಹಿಳಾ ಸದಸ್ಯರಿದ್ದು, ಇದರಲ್ಲಿ ಅಧ್ಯಕ್ಷೆಯಾಗುವ ಪಟ್ಟಿಯಲ್ಲಿ ಸುಮತಿ ಭಟ್ ಮುಂಚೂಣಿಯಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಇಂತವರಿಗೆ ಅವಕಾಶ ಎನ್ನುವುದಕ್ಕಿಂತ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ವಾರ್ಡ್ ನಂಬರ್ 16ರ ಸದಸ್ಯೆ ಪಲ್ಲವಿ ಕೂಡಾ ಅಧ್ಯಕ್ಷೆ ಸ್ಥಾನದ ಆಕಾಂಕ್ಷಿ ಆಗಿದ್ದು, ಆದರೆ ಇವರ ಬಗ್ಗೆ ಪಕ್ಷದಲ್ಲಿ ಒಳ್ಳೆಯ ಅಭಿಪ್ರಾಯ ಇಲ್ಲ ಮತ್ತು ಇವರ ಮೇಲೆ ಅನೇಕ ಆರೋಪಗಳಿವೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ
- ವಾಹನ ಸವಾರರಿಗೆ ವಂಚನೆ ಮಾಡುತ್ತಿದ್ದ ಕುಮಟಾ ತಾಲೂಕಿನ 2 ಪೆಟ್ರೋಲ್ ಬಂಕ್ ಸೀಜ್..!
- ಗಮನ ಸೆಳೆದ ವಾರ್ತಾ ಇಲಾಖೆಯ ʼಗ್ಯಾರಂಟಿ ಬದುಕುʼ ಜಾಹೀರಾತು
- ಕಾರವಾರ ಬಂದರಿಗೆ ಬಂದ ಪಾಕಿಸ್ತಾನ ಪ್ರಜೆಗೆ ತಡೆ
ಜನಪ್ರತಿನಿಧಿ ಆದವರಿಂದ ಮತದಾರರು ಸಹಜವಾಗೇ ಸರ್ಕಾರದಿಂದ ಲಭಿಸುವ ಸೇವೆಗಳನ್ನು ಬಯಸುತ್ತಾರೆ. ಆದರೆ ಪಲ್ಲವಿ ಮೇಡಂ ಕಮೀಷನ್ ಇಲ್ಲದೆ ಯಾವ ಕೆಲಸವನ್ನೂ ಮಾಡುವುದಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ತನ್ನ ವಾರ್ಡಿನಲ್ಲಿ ನಡೆಯುವ ಕಾಮಗಾರಿಯಲ್ಲೂ ಇವರು ಕಮೀಷನ್ ಪಡೆಯುತ್ತಾರೆ, ಇದಕ್ಕಿಂತ ಹೆಚ್ಚಾಗಿ ಉದ್ಯೋಗ ಕೊಡಿಸುವುದಾಗಿ ಅನೇಕ ನಿರುದ್ಯೋಗಿಗಳಿಂದ ಹಣ ಪಡೆದು ಅವರಿಗೆಲ್ಲ ಟೋಪಿ ಹಾಕಿದ್ದಾರೆ ಎನ್ನುವ ಆರೋಪವೂ ಪಲ್ಲವಿ ಮೇಲಿದೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದ್ದು, ಈ ವಿಚಾರವಾಗಿ ಖುದ್ದು ಪಲ್ಲವಿ ಅವರೇ ಕೆಲವು ಬಾರಿ ಠಾಣೆಗೆ ಹೋಗಿ ಬಂದಿದ್ದಾರೆ ಎನ್ನುವ ವಿಚಾರವನ್ನು ಸ್ಥಳೀಯರು ಸುದ್ದಿಬಿಂದು''ಗೆ ತಿಳಿಸಿದ್ದಾರೆ. ಈ ಮಧ್ಯೆ ಪಲ್ಲವಿ ಮೇಡಂ ಜನಪ್ರತಿನಿಧಿಯಂತೆ ವರ್ತಿಸದೆ ಪುರಸಭೆಯ ಏಜೆಂಟರಂತೆ ವರ್ತಿಸುತ್ತಾರೆ. ಇವರೇ ಪುರಸಭೆಯ ಸಿಬ್ಬಂದಿಗೆ ಲಂಚ ತಲುಪಿಸುವ ಕೆಲಸ ಮಾಡುತ್ತಾರೆ ಎನ್ನುವ ಆರೋಪವೂ ಇದೆ. ಈ ಕುರಿತು
ಸುದ್ದಿಬಿಂದು” ಪಲ್ಲವಿ ಅವರ ಪ್ರತಿಕ್ರಿಯೆ ಪಡೆಯಲು ಪಲ್ಲವಿ ಅವರ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಲು ಹಲವು ಬಾರಿ ಪ್ರಯತ್ನಪಟ್ಟರೂ ಸಂಪರ್ಕ ಸಾಧ್ಯವಾಗಿಲ್ಲ.
ವಾರ್ಡ್ ನಂಬರ್ 12ರಿಂದ ಸುಮತಿ ಭಟ್ ಮತ್ತು ವಾರ್ಡ್ ನಂಬರ್ 16ರಿಂದ ಪಲ್ಲವಿ ಮಡಿವಾಳ ನಡುವೆ ಕುಮಟಾ ಪುರಸಭೆಯ ಅಧ್ಯಕ್ಷೆ ಸ್ಥಾನಕ್ಕೆ ನೇರ ಪೈಪೋಟಿ ಇದ್ದು, ಇದರಲ್ಲಿ ಸುಮತಿ ಭಟ್ ಈ ಹಿಂದೆ ಉಪಾಧ್ಯಕ್ಷೆ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದುವುದರ ಜೊತೆಗೆ ತಾನೊಬ್ಬ ಗಟ್ಟಿಗಿತ್ತಿ ಮಹಿಳೆ ಎನ್ನುವುದನ್ನು ಗಟ್ಟಿ ಮಾತುಗಳ ಮೂಲಕ ಸಾಬೀತು ಪಡಿಸಿದ್ದಾರೆ. ಇದರ ಜೊತೆಗೆ ಸುಮತಿ ಆಯ್ಕೆಗೆ ಬಹುತೇಕ ಪುರಸಭಾ ಸದಸ್ಯರು ಸಮ್ಮತಿ ಸೂಚಿಸುವ ಸಾಧ್ಯತೆ ಇದ್ದು, ಪಲ್ಲವಿ ಆಯ್ಕೆಗೆ ಅನೇಕ ಸದಸ್ಯರು ವಿರೋಧ ವ್ಯಕ್ತ ಪಡಿಸುವುದು ದಟ್ಟವಾಗಿದೆ. ಒಟ್ಟಾರೆ ಕುಮಟಾದಲ್ಲಿ ಇಂದು ನಡೆಯುವ ಬಿಜೆಪಿ ಸಭೆ ಅನೇಕ ಕುತೂಹಲಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ.
ಅನೇಕ ತಿಂಗಳಿಂದ ಕುಮಟಾ ಪುರಸಭೆಯಲ್ಲಿ ಜನಾಡಳಿತ ಇಲ್ಲದೆ ಅಧಿಕಾರಿಗಳದ್ದೇ ದರ್ಬಾರಾಗಿತ್ತು. ಇದೀಗ ಕುಮಟಾ ಪಟ್ಟಣದ ಜನ ಪುರಸಭೆಯಿಂದ ಜನಪರ ಆಡಳಿತ ಬಯಸುತ್ತಿದ್ದು, ಬಿಜೆಪಿ ಪಕ್ಷ ಉತ್ತಮ ಸದಸ್ಯರನ್ನೇ ಅಧ್ಯಕ್ಷೆ ಸ್ಥಾನಕ್ಕೆ ಆಯ್ಕೆ ಮಾಡುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ.