suddibindu.in
ಕುಮಟಾ : ಹವಾಮಾನ ಇಲಾಖೆ ಭಾರೀ ಮಳೆಯ ಮುನ್ಸೂಚನೆ ನೀಡಿದ ಆಧಾರದಲ್ಲಿ ಜಿಲ್ಲಾಡಳಿತ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕಿನ ಶಾಲಾ, ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ರಜೆ ನೀಡಬೇಕೆಂದು ಆದೇಶಿಸಿದೆ. ಆದರೆ ಕುಮಟಾದ ಪ್ರತಿಷ್ಠಿತ ಎನಿಸಿಕೊಂಡ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಅವರು ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ರಜೆ ನೀಡದೆ ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿದ್ದಾರೆ.

ಜಿಲ್ಲಾಧಿಕಾರಿ ಸುಮ್ಮನೆ ಮಕ್ಕಳು ಮಜಾ ಮಾಡಲಿ ಎಂದು ರಜೆ ಕೊಟ್ಟಿಲ್ಲ. ಹವಾಮಾನ ಇಲಾಖೆಯ ಸೂಚನೆ ಮೇರೆಗೆ ರಜೆ ಕೊಟ್ಟಿದ್ದಾರೆ. ಇಂತಹ ಸಂದರ್ಭಗಳಲ್ಲಿ ಶಾಲಾಡಳಿತ ಬಹಳ ಎಚ್ಚರಿಕೆ ವಹಿಸಬೇಕು. ಕೊಂಕಣ ಶಾಲೆ ಗುಡ್ಡದ ಮೇಲೆಯೇ ಇದೆ. ಶಿರೂರು ದುರಂತ, ಕೇರಳದ ವಯನಾಡ್ ದುರ್ಘಟನೆ ಅನಿರೀಕ್ಷಿತ. ಭಾರೀ ಮಳೆಯಿಂದ ಎಲ್ಲೆಡೆ ಗುಡ್ಡ ಜರಿಯುತ್ತಿದೆ. ಹೆದ್ದಾರಿಯ ವಿವಿಧೆಡೆ ಈಗಾಗಲೆ ಹೆದ್ದಾರಿ ಕುಸಿದಿರುವುದು ಎಲ್ಲರಿಗೂ ಗೊತ್ತಿದೆ. ವಸ್ತುಸ್ಥಿತಿ ಹೀಗಿರುವಾಗ ಶಾಲಾಡಳಿತ ಮಕ್ಕಳನ್ನು ಶಾಲೆಗೆ ಕರೆಯಿಸಿ ಸಾಧಿಸುವುದಾದರು ಏನು?

ಇದನ್ನೂ ಓದಿ

ಜಿಲ್ಲಾಡಳಿತ ಸಮಯಕ್ಕೆ ಸರಿಯಾಗಿ ಆದೇಶ ನೀಡಲಿ.
ಹವಾಮಾನ ಇಲಾಖೆಯ ವರದಿ ಸಾಕಷ್ಟು ಮೊದಲೇ ಜಿಲ್ಲಾಡಳಿತಕ್ಕೆ ಸಿಕ್ಕಿರುತ್ತದೆ. ಆದರೆ ಜಿಲ್ಲಾಡಳಿತ ಈ ಬಾರಿ ಬಹಳ ವಿಳಂಬವಾಗಿ ರಜೆ ಘೋಷಿಸಿ ಎಡವಟ್ಟು ಮಾಡಿದೆ. ಶಾಲಾ ವಾಹನಗಳು ಮಕ್ಕಳನ್ನು ಶಾಲೆಗೆ ಕರೆತಂದ ಮೇಲೆ ಜಿಲ್ಲಾಡಳಿತ ರಜೆ ಘೋಷಿಸಿದರೆ ಇಂತಹ ಎಡವಟ್ಟಾಗುತ್ತದೆ. ಅದರೆ ಜಿಲ್ಲಾಡಳಿತದ ಆದೇಶ ಸಿಗುತ್ತಿದ್ದಂತೆ ಶಾಲಾಡಳಿತ ಮಕ್ಕಳನ್ನು ಪುನಃ ಮನೆಗೆ ಕಳುಹಿಸುವ ಕೆಲಸ ಮಾಡಬೇಕಿತ್ತು ಎನ್ನುವುದು ಅನೇಕ ಪಾಲಕರ ಅಭಿಪ್ರಾಯವಾಗಿದೆ. ಈ ಪ್ರಕರಣದಲ್ಲಿ ಶಾಲಾಡಳಿತ ಮತ್ತು ಜಿಲ್ಲಾಡಳಿತ ಇಬ್ಬರೂ ತಿದ್ದಿಕೊಳ್ಳಬೇಕು. ಮುಂದೆ ಹೀಗಾಗದಂತೆ ಎರಡೂ ಆಡಳಿತ ಎಚ್ಚರಿಕೆ ವಹಿಸಬೇಕೆಂದು ಪಾಲಕರು ಆಗ್ರಹಿಸಿದ್ದಾರೆ.