suddibindu.in
Siddapur| ಸಿದ್ದಾಪುರ : ಮಲೆನಾಡಿನ ಹಲವೆಡೆ ಅರಿದ್ರೆ ಮಳೆ ಹಬ್ಬವನ್ನು(Aridre rain festival) ವಿಜೃಂಭಣೆಯಿಂದ ಆಚರಿಸಲಾಗತ್ತೆ. ಗ್ರಾಮದ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಆರಿದ್ರೆ ಮಳೆ ನಕ್ಷತ್ರದಲ್ಲಿ ಹಬ್ಬವನ್ನು ಆಚರಿಸುವುದು ಆಚರಣೆಯಾಗಿ ಬಂದಿದೆ.

ಊರಿನ ಜನರು ಸಡಗರ ಸಂಭ್ರಮದಿಂದ ಕುಣಿದು ಕುಪ್ಪಳಿಸಿ ಹಬ್ಬವನ್ನು ಆಚರಿಸುವುದನ್ನು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಲವೆಡೆ ಕಾಣಬಹುದು ಸಿದ್ದಾಪುರ ತಾಲೂಕಿನ ಹಲಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಸೂರ್ ನಲ್ಲಿ ದೇವರನ್ನ ತಲೆ ಮೇಲೆ ಹೊತ್ತು ಬರಿಗಾಲಿನಲ್ಲಿ ಕೆಂಡವನ್ನ ಹಾಯುವ ವಿಶೇಷ ಆಚರಣೆ ತಲೆತಲಾಂತರದಿಂದ ನಡೆದುಕೊಂಡು ಬಂದಿದೆ.ಹಿಂದಿನ ಕಾಲದಲ್ಲಿ ದೇವತೆಗಳೇ ಕೆಂಡವನ್ನ ಹಾಯುತ್ತಿದ್ದವು ಎಂದು ಹಿರಿಯರು ಹೇಳುತ್ತಾ ಆಚರಿಸಿಕೊಂಡು ಬಂದಿದ್ದಾರೆ, ನಾವು ದೇವರನ್ನ ತಲೆ ಮೇಲೆ ಹೊತ್ತು ದೇವತೆಯ ರೂಪದಲ್ಲಿ ಕೆಂಡವನ್ನ ಹಾಯುತ್ತೇವೆ ಅಂತಾರೆ ಇಲ್ಲಿನ ಹಿರಿಯರು.

ಇದನ್ನೂ ಓದಿ

ಇಲ್ಲಿ ಸುತ್ತಲೂ ಕುಮಾರೇಶ್ವರ, ಬ್ರಹ್ಮ,ವೀರಭದ್ರ, ಈಶ್ವರ, ಮಾರಿಕಾಂಬ ದೇವಸ್ಥಾನಗಳಿವೆ, ಭೂತಪ್ಪ ಬೀರಪ್ಪ, ಗಾಮದೇವರು, ಕುಮಾರೇಶ್ವರ, ಹುಲಿ ದೇವರು ಜಟಗೇಶ್ವರ, ಬಿಳಿಯಪ್ಪ ದೇವರನ್ನು ಹೊತ್ತು ಕೆಂಡ ಹಾಯುತ್ತಾರೆ.ಮೊದಲ ದಿನ ಊರಿನಲ್ಲಿ ಆರಿದ್ರೆ ಮಳೆ ಹಬ್ಬವನ್ನು ಆಚರಿಸಿ ಅತಿಥಿಗಳನ್ನು ಸತ್ಕರಿಸಿ ಮಾರನೇ ದಿವಸ ಈ ಆಚರಣೆಯನ್ನು ಆಚರಿಸುತ್ತೇವೆ ಊರಿನ ಆರು ಏಳು ಸಮುದಾಯದವರು ಎಲ್ಲರೂ ಒಟ್ಟು 165 ಮನೆಗಳು ಸೇರಿಕೊಂಡು ಒಟ್ಟಾಗಿ ಈ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ.ಕಾರ್ತಿಕ ಮಾಸದಲ್ಲಿ ಈ ದೇವರುಗಳಿಗೆ ಒಮ್ಮೆ ಪೂಜಿಸಿ ಇಡಲಾಗುತ್ತದೆ, ನಂತರ ಆರಿದ್ರೆ ಮಳೆ ಹಬ್ಬದಲ್ಲಿ ಈ ಉತ್ಸವ ಆಚರಿಸಿ ಮತ್ತೆ ದೇವರನ್ನ ಪೆಟ್ಟಿಗೆಯಲ್ಲಿಟ್ಟು ಮುಂದಿನ ವರ್ಷ ಮತ್ತೆ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

ಜಿಟಿ ಜಿಟಿಯಾಗಿ ಸುರಿಯುತ್ತಿರುವ ಮಳೆಯಲ್ಲಿ ದೇವಾಲಯದ ಎದುರಿನ ಸ್ಥಳವೊಂದರಲ್ಲಿ ಕಟ್ಟಿಗೆಯನ್ನ ಸುಟ್ಟು ಅದರಿಂದಾದ ಕೆಂಡವನ್ನು ದೇವರನ್ನು ಹೊತ್ತವರು ಬರಿಗಾಲಿನಲ್ಲಿ ತುಳಿದು ಓಡುವುದನ್ನ ನೋಡಲು ಮೈ ರೋಮಾಂಚನಗೊಳ್ಳುತ್ತದೆ.ಊರಿನ ಎಲ್ಲಾ ಜನರು ದೇವಾಲಯದ ಸುತ್ತಲೂ ಕೆಂಡ ಹಾಯುವುದು ಕಾಣುವ ರೀತಿಯಲ್ಲಿ ನಿಂತುಕೊಂಡು ದೇವರ ನಾಮವನ್ನು ಜಪಿಸುತ್ತಾ ಹೋಗುತ್ತಾ ಸಿಳ್ಳೆ ಹಾಕುತ್ತ ಸಂಭ್ರಮಿಸುವುದು ದೇವರ ಹೊತ್ತವರಿಗೆ ಇನ್ನಷ್ಟು ಶಕ್ತಿ ಬದಂತೆ.

ಈ ಸಂದರ್ಭದಲ್ಲಿ ನಾರಾಯಣ ಐ ನಾಯ್ಕ, ಮೋಹನ ನಾಯ್ಕ, ಮಂಜ ನಾಯ್ಕ, ರಾಮಚಂದ್ರ ಮೈಲಾ ನಾಯ್ಕ, ಉಮೇಶ ಸಣ್ಣಪ್ಪ ನಾಯ್ಕ,ಮಾಬ್ಲೆಶ್ವರ ನಾಯ್ಕ, ರಾಮಚಂದ್ರ ಬಡಗಿ, ಸುರೇಶ ಕನ್ನ ಮಡಿವಾಳ, ಬಸವರಾಜ ಚೆನ್ನಯ್ಯ, ಕೆರೆ ಸ್ವಾಮಿ ಗೌಡರ್, ಪ್ರಕಾಶ ನಾಯ್ಕ, ಮಹೇಶ ಕೆ ನಾಯ್ಕ, ಗಣಪತಿ ನಾಯ್ಕ್, ಸಂತೋಷ್ ನಾಯ್ಕ ದೇವರಾಜ ನಾಯ್ಕ, ಸತೀಶ ನಾಯ್ಕ ಇನ್ನಿತರ ಊರಿನ ಪ್ರಮುಖರು ಉಪಸ್ಥಿತರಿದ್ದರು.