suddibindu.in
ಸಿದ್ದಾಪುರ: ಅಭಿವೃದ್ಧಿಯ ಮೇಲೆ ಮತ ಕೇಳುವ ನೈತಿಕತೆ ಬಿಜೆಪಿಗಿಲ್ಲ. ಶೋಕಿ- ದುರಾಡಳಿತದ ಬಿಜೆಪಿ ನೇತೃತ್ವದ ಸರ್ಕಾರವನ್ನ ದೂರವಿಡಬೇಕಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಕರೆ ನೀಡಿದರು.

ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಲೋಕಸಭಾ ಚುನಾವಣೆಯ ಪ್ರಯುಕ್ತ ನಗರದ ಹೊಸುರು ಜನತಾಕಾಲೊನಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಬಹಿರಂಗ ಪ್ರಚಾರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ೬೦ ವರ್ಷಗಳ ಸಾಧನೆಯನ್ನ ೧೦ ವರ್ಷಗಳಲ್ಲಿ ನಾನು ಮಾಡಿದ್ದೆಂದು ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಗರು ಯಾರಾದರು ಪಾಲ್ಗೊಂಡಿದ್ದರಾ? ಆರು ಬಾರಿ ಶಾಸಕರಾಗಿ ಗೆದ್ದು ಶೂನ್ಯ ಸಾಧನೆ ಮಾಡಿದ ವ್ಯಕ್ತಿಯನ್ನ, ಅರಣ್ಯ ಅತಿಕ್ರಮಣದಾರರಿಗೆ ರಕ್ಷಣೆ ನೀಡುವ ಬಗ್ಗೆ ಸೊಲ್ಲೆತ್ತದ, ಕಸ್ತೂರಿ ರಂಗನ್ ವರದಿಯ ಕುರಿತು ಚಕಾರವೆತ್ತದವರನ್ನ ಮೋದಿ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಅಭಿವೃದ್ಧಿ ಮಾಡದ ಅವರನ್ನ ಕಳೆದ ಚುನಾವಣೆಯಲ್ಲಿ ಮನೆಗೆ ಕಳುಹಿಸಿದ್ದಿರಿ. ಮುಂದೆ ಇನ್ನಷ್ಟು ಅಭಿವೃದ್ಧಿಗೆ, ದೇಶದಲ್ಲಿ ನೆಮ್ಮದಿ ಇರಬೇಕಾದರೆ ಮತ್ತೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಾತ್ರ ಸಾಧ್ಯ. ಬಿಜೆಪಿಯದ್ದು ಸ್ವಾರ್ಥ, ಭ್ರಷ್ಟ ಸರ್ಕಾರ. ಬಣ್ಣಬಣ್ಣದ ಮಾತನಾಡಿ, ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚಿ ಅಧಿಕಾರಕ್ಕೆ ಬಂದದ್ದು ಬಿಜೆಪಿ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ

ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿರುವ ಇತಿಹಾಸ ಹೊಂದಿರುವ ಪಕ್ಷ ಕಾಂಗ್ರೆಸ್. ಮೊನ್ನೆ ಮೊನ್ನೆ ಹುಟ್ಟಿದ ಬಿಜೆಪಿಗೆ ರಾಷ್ಟ್ರೀಯ ಧ್ವಜ ಕೈನಲ್ಲಿ ಹಿಡಿಯಲೂ ಕಷ್ಟವಾಗಿತ್ತು. ಅಂಥವರು ದೇಶಭಕ್ತಿಯ ಪಾಠ ಹೇಳಲು ಬರುತ್ತಾರೆ. ದೇಶಕ್ಕೆ ಇವರ ಒಂದು ಕೊಡುಗೆ ಹೇಳಲಿ. ಇದು ದೇಶದ ಬಗ್ಗೆ ಮಾತನಾಡುವ ಚುನಾವಣೆ ಎನ್ನುವ ಬಿಜೆಪಿ ಅಭ್ಯರ್ಥಿ ಕಾಗೇರಿಯವರೇ, ಗಲ್ಲಿಯಿಂದ ದಿಲ್ಲಿಯಾಗುತ್ತದೋ ಅಥವಾ ದಿಲ್ಲಿಯಿಂದ ಗಲ್ಲಿಯಾಗುತ್ತದೋ? ದೇಶದ ಅನ್ನದಾತರು ರಸ್ತೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದರೂ ಅವರನ್ನು ಖಲಿಸ್ತಾನಿ ಉಗ್ರರು ಎನ್ನುವ ಬಿಜೆಪಿಗರಿಗೆ ಮನೆಯ ದಾರಿ ತೋರಿಸಬೇಕಿದೆ ಎಂದರು.

ನಮ್ಮ ಮನೆ, ನಮ್ಮ ಓಣಿ ಸ್ವಚ್ಛ ಮಾಡುವುದಕ್ಕೆ ಇವರ ಸ್ವಚ್ಛ ಭಾರತ್ ಹೆಸರಿನ ಪ್ರಚಾರ. ಕಾಂಗ್ರೆಸ್ ನಿರ್ಮಿಸಿದ ರಾಷ್ಟ್ರೀಯ ಸಂಪತ್ತನ್ನು ಮಾರಾಟ ಮಾಡಿದ ಇವರು, ದೇಶ ಕಟ್ಟುತ್ತಿದ್ದೇನೆ ಎನ್ನುತ್ತಾರೆ. ಗ್ಯಾರಂಟಿ ಯೋಜನೆಯನ್ನ ಬಿಜೆಪಿ ಮನೆಯನ್ನೂ ಬಿಡದೆ ತಲುಪಿಸಿದ್ದೇವೆ. ಸುಳ್ಳು ಹೇಳುವ, ತಪ್ಪು ದಾರಿ ತೋರಿಸುವವರಿಗೆ ಮತ ನೀಡಬೇಡಿ. ಮೋದಿ ನೋಡಿ ಮತ ಹಾಕಿ ಎನ್ನುವ ಬಿಜೆಪಿಗರು ಎಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಅವರನ್ನೇ ಯಾಕೆ ನಿಲ್ಲಿಸಬಾರದು? ನನ್ನನ್ನ ‘ಇಂಪೋರ್ಟೆಡ್ ಕ್ಯಾಂಡಿಡೇಟ್’ ಎನ್ನುವ ಬಿಜೆಪಿಗರಿಗೆ ಸಂವಿಧಾನದ ಪ್ರಕಾರ ದೇಶದ ನಾಗರಿಕನಿಗೆ ಎಲ್ಲಿಂದ ಬೇಕಾದರೂ ಸ್ಪರ್ಧಿಸುವ ಹಕ್ಕಿದೆ ಎಂಬುದು ಗೊತ್ತಿಲ್ಲ. ಗುಜರಾತ್ ಬಿಟ್ಟು ಮೋದಿಯವರನ್ನು ವಾರಣಾಸಿಗೆ ಇಂಪೋರ್ಟ್ ಮಾಡಿ ಯಾಕೆ ನಿಲ್ಲುತ್ತಾರೆ? ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ್ ನಾಯ್ಕ, ಪ್ರಚಾರ ಸಮಿತಿ ಅಧ್ಯಕ್ಷ ವೆಂಕಟೇಶ್ ಹೆಗಡೆ ಹೊಸಬಾಳೆ, ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಕೆಜಿ ನಾಗರಾಜ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ನಾಯ್ಕ, ಪ್ರಮುಖರಾದ ಆರ್ ಎಂ ಹೆಗಡೆ, ವಿ ಎನ್ ನಾಯ್ಕ, ಜಯರಾಮ್ ನಾಯ್ಕ, ಚಂದ್ರು ಕಾನಡೆ, ಲೀನಾ ಫರ್ನಾಂಡಿಸ್, ಬಾಬು ನಾಯ್ಕ, ಸುರೇಂದ್ರ ದಫೇದಾರ್, ಇಂದಿರಾ ನಾಯ್ಕ, ಲಲಿತಾ ನಾಯ್ಕ, ಮನೋಹರ್ ಮುಂತಾದವರು ಉಪಸ್ಥಿತರಿದ್ದರು.