suddibindu.in
ಶಿರಸಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರ ಜಾತಿ ಕುರಿತು ಬಿಜೆಪಿ ಕಾರ್ಯಕರ್ತ ಎನ್ನಲಾದ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡಿರುವುದಕ್ಕೆ ಜಿಲ್ಲಾ ಯುವ ಕಾಂಗ್ರೆಸ್ ಖಂಡಿಸಿದ್ದು, ತಪ್ಪಿತಸ್ಥನನ್ನ ಕೂಡಲೇ ಬಂಧನ ಮಾಡುವಂತೆ ಜಿಲ್ಲಾಧ್ಯಕ್ಷ ಸಂತೋಷ್ ಶೆಟ್ಟಿ ಆಗ್ರಹಿಸಿದ್ದಾರೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಮಹಿಳಾ ಅಭ್ಯರ್ಥಿಯನ್ನ ಕಣಕ್ಕೆ ಇಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ವಿದ್ಯಾವಂತ ಅಭ್ಯರ್ಥಿ, ವೈದ್ಯೆ ಡಾ.ಅಂಜಲಿ ನಿಂಬಾಳ್ಕರ್ ಅವರನ್ನ ಕಣಕ್ಕೆ ಇಳಿಸಿದೆ. ಅಂತೆಯೇ ಕುಮಟಾದ ಕಾಂಗ್ರೆಸ್ ಮುಖಂಡರು ನಮ್ಮ ಅಭ್ಯರ್ಥಿಯ ಪರ ಅಭಿಮಾನದಿಂದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನ ಹಂಚಿಕೊಂಡಿದ್ದರು.

ಇದನ್ನೂ ಓದಲು

ಈ ವೇಳೆ ಕುಮಟಾ ತಾಲೂಕಿನ ಶ್ರೀಕಾಂತ ಹೆಗಡೆ ಅಂತ್ರವಳ್ಳಿ ಎನ್ನುವ ಬಿಜೆಪಿ ಕಾರ್ಯಕರ್ತ ನಮ್ಮ ಪಕ್ಷದ ಅಭ್ಯರ್ಥಿಗೆ ಮರಾಠಿ ಪಿಂಡ ಎಂದು ಹೇಳುವ ಮೂಲಕ ಸಮಾಜದಲ್ಲಿ ಜಾತಿ ಜಾತಿಗಳ ನಡುವೆ ಕಲಹ ಉಂಟು ಮಾಡಲು ಹೊರಟಿದ್ದಾರೆ. ಈತನ ನಡೆಯನ್ನ ಜಿಲ್ಲಾ ಯುವ ಕಾಂಗ್ರೆಸ್ ಕಟುವಾಗಿ ಖಂಡಿಸಿದ್ದು, ಆತನನ್ನ ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ಈ ಬಾರಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಗ್ಯಾರಂಟಿಗಳನ್ನ ನುಡಿದಂತೆ ಅನುಷ್ಠಾನಕ್ಕೆ ತಂದಿದ್ದು, ಜನರು ನೆಮ್ಮದಿಯಿಂದ ಜೀವನ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಜಿಲ್ಲೆಯ ಜನರು ಕಾಂಗ್ರೆಸ್ ಪಕ್ಷದ ಪರ ಒಲವು ತೋರುತ್ತಿರುವುದನ್ನ ಸಹಿಸದ ಬಿಜೆಪಿಯ ಕಾರ್ಯಕರ್ತರು ಅಭ್ಯರ್ಥಿಯ ಜಾತಿ ನಿಂದಿಸಿ ಕೀಳು ಮಟ್ಟದ ರಾಜಕೀಯ ಮಾಡಲು ಹೊರಟಿದ್ದಾರೆ. ಜಿಲ್ಲೆಯ ಪ್ರಜ್ಞಾವಂತ ಜನರು ಇದನ್ನ ಗಮನಿಸುತ್ತಿದ್ದಾರೆ. ಈ ಬಾರಿ ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ ಗೆ ಮತ ಹಾಕಿ ನಮ್ಮ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರನ್ನ ಗೆಲ್ಲಿಸಲಿದ್ದಾರೆ ಎಂದು ಸಂತೋಷ್ ಶೆಟ್ಟಿ ಪ್ರಕಟಣೆ ಮೂಲಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.