ಸುದ್ದಿಬಿಂದು ಬ್ಯೂರೋ
ಕಾರವಾರ
: ಶಿರಸಿ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೇಟ್ ಘೋಷಣೆ ಆಗುತ್ತಿದ್ದಂತೆ ಬಂಡಾಯ ಸ್ಫೋಟಗೊಂಡಿದೆ. ನಿನ್ನೆಯಷ್ಟೆ ಶಿರಸಿ ಕ್ಷೇತ್ರಕ್ಕೆ ಭೀಮಣ್ಣ ನಾಯ್ಕ ಅವರನ್ನ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿತ್ತು.ಇದರ ಬೆನ್ನಲ್ಲೆ ಕಾಂಗ್ರೆಸ್ ನಲ್ಲಿ ಭಿನ್ನಮತದ ಬಿಸಿ ತಟ್ಟಿದೆ.

ಈ ಕ್ಷೇತ್ರದ ಟಿಕೆಟ್ ಗಾಗಿ ವೆಂಕಟೇಶ ಹೆಗಡೆ ಹೊಸಬಾಳೆ ಅವರು ತೀವ್ರವಾಗಿ ಸ್ಪರ್ಧೆ ನಡೆಸಿದ್ದರು. ಆದರೆ ಇದೀಗ ಅವರಿಗೆ ಟಿಕೆಟ್ ಕೈ ತಪ್ಪಿದ್ದು ಇದರಿಂದಾಗಿ ಹೊಸಬಾಳೆ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಆಗಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ.

ಶಿರಸಿ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ವೆಂಕಟೇಶ ಹೆಗಡೆ ಹೊಸಬಾಳೆ ಅವರು ಬಂಡಾಯವಾಗಿ ಸ್ಪರ್ಧಿಸುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ. 25 ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶಿರಸಿ ಕ್ಷೇತ್ರದ ಜನರು ಹೊಸ ಮುಖ ಬಯಸಿದ್ದು, ಅಭಿವೃದ್ಧಿಗಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.