ಸುದ್ದಿಬಿಂದು ಬ್ಯೂರೋ
ಕಾರವಾರ :
ಇದುವರಗೆ ಕಾರವಾರ -ಅಂಕೋಲಾ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ನಿಂದ ಮಾಜಿ ಸಚಿವ ಆನಂದ ಅಸ್ನೋಟಿಕರ್ ಸ್ಪರ್ಧೆ ಮಾಡಬಹದು ಎನ್ನಲಾಗುತ್ತಿತ್ತು. ಆದರೆ ಬದಲಾದ ರಾಜಕಾರಣದಲ್ಲಿ ‌ಇದೀಗ ಚೈತ್ರಾ ಕೋಠಾರಕರ್ ಅವರು ಸ್ಪರ್ಧೆ ಮಾಡಲಿದ್ದಾರೆಂದು ಜೆಡಿಎಸ್ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಚೈತ್ರಾ ಕೋಠಾರಕರ್ ಅವರು ಇದುವರೆಗೆ ಕಾಂಗ್ರೆಸ್ ಟಿಕೆಟ್ ಗಾಗಿ ತೀವ್ರ ಪೈಪೋಟಿ ನಡೆಸಿದ್ದರು. ಆದರೆ ಕಾರವಾರ ಕಾಂಗ್ರೆಸ್ ಟಿಕೆಟ್ ಸತೀಶ ಸೈಲ್ ಅವರಿಗೆ ಘೋಷಣೆ ಆದ ಬಳಿಕ ಚೈತ್ರಾ ಅವರು ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಕೆಲ ದಿನಗಳ ಹಿಂದೆ ಚೈತ್ರಾ ಕೋಠಾರಕರ್ ಅವರು ಹಳಿಯಾಳದ ಜೆಡಿಎಸ್ ಅಭ್ಯರ್ಥಿ ಆಗಿರುವ ಎಸ್ ಎಲ್ ಘೋಟ್ನೆಕರ್ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿ ಘೋಟ್ನೆಕರ್ ಅವರು ಕುಮಾರ ಸ್ವಾಮಿ ಅವರ ಗಮನಕ್ಕೂ ತಂದಿರುವುದಾಗಿ ಹೇಳಲಾಗುತ್ತಿದೆ.

ಈ ಎಲ್ಲಾ ವಿಚಾರಕ್ಕೆ ಪುಷ್ಠಿ ನೀಡುವಂತೆ ಕಾರವಾರ ಜೆಡಿಎಸ್ ತಾಲೂಕಾಧ್ಯಕ್ಷ ಅಜಿತ್ ಪೋಕಳೆ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿಯನ್ನ ನಡೆಸಿದ್ದು, ಇನ್ನೂ ಮೂರು ನಾಲ್ಕು ದಿನದಲ್ಲಿ ಕಾರವಾರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾರು ಅನ್ನುವುದನ್ನ ಕುಮಾರಸ್ವಾಮಿ ಅವರು ಘೋಷಣೆ ಮಾಡಲಿದ್ದಾರೆ.ಸ್ಪರ್ಧೆ ಮಾಡಲಿರುವವರು ಸಹ ಈಗಾಲೆ‌ ಕುಮಾರಸ್ವಾಮಿ ಅವರ ಜೊತೆ ಮಾತುಕತೆ ನಡೆಸಿರುವುದಾಗಿ ಪೋಕಳೆ ತಿಳಿಸಿದ್ದಾರೆ‌