ಸುದ್ದಿಬಿಂದು ಬ್ಯೂರೋ
ಸಿದ್ದಾಪುರ: ಇತ್ತೀಚೆಗೆ ಸಾಕಷ್ಟು ಸೌಲಭ್ಯವಿದ್ದರೂ ಸಹ ಯುವಜನತೆಯಲ್ಲಿ ಕ್ರೀಯಾಶೀಲತೆ ಕಡಿಮೆಯಾಗುತ್ತಿದ್ದು, ಸಮಾಜದ ಮಕ್ಕಳು ಮೊಬೈಲ್ ಮಾಯೆಯಿಂದ ಹೊರಬರಬೇಕು ಎಂದು ಉನ್ನತ ಶಿಕ್ಷಣ ಇಲಾಖೆಯ ಆಯುಕ್ತ ಜಿ.ಜಗದೀಶ ಕರೆ ನೀಡಿದರು.

ಸಿದ್ದಾಪುರ ತಾಲೂಕಾ ಆರ್ಯ-ಈಡಿಗ, ನಾಮಧಾರಿ-ಬಿಲ್ಲವ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪಟ್ಟಣದ ಶಂಕರಮಠದಲ್ಲಿ ಆಯೋಜಿಸಿದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಪ್ರಸ್ತುತ ಸ್ಪರ್ಧೆ ತುಂಬಾ ತುರುಸಿನಿಂದ ನಡೆಯುತ್ತಿದೆ. ಸ್ಪರ್ಧಾತ್ಮಕ ಯುಗದಲ್ಲಿ ಎದೆಯೊಡ್ಡಿ ನಿಲ್ಲಬೇಕಾದರೆ ಯುವಜನತೆ ಇನ್ನಷ್ಟು ಶ್ರಮ ವಹಿಸಬೇಕು. ಗುರಿಯ ಕಡೆ ಗಮನವಿರಬೇಕು. ಇತ್ತೀಚಿನ ದಿನಗಳಲ್ಲಿ ಯುವಜನತೆಯ ಕ್ರಿಯಾಶೀಲತೆ ಕಡಿಮೆಯಾಗುತ್ತಿದೆ‌. ಯುವಜನತೆ ಎಚ್ಚೆತ್ತುಕೊಳ್ಳದಿದ್ದರೆ ಇಂದಿನ ಯುಗದಲ್ಲಿ ತುಂಬಾ ಕಷ್ಟಪಡಬೇಕಾಗುತ್ತದೆ. ಮೌಡ್ಯದಿಂದ ಹೊರ ಬಂದು ಪ್ರಪಂಚ ಜ್ಞಾನ ಪಡೆಯಿರಿ. ಹಣೆಬರಹ ಹಾಗೂ ಕೈಗೆರೆ ನಂಬಿದರೆ ಯಾರು ಉದ್ಧಾರವಾಗಲ್ಲ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಈಗಿನ ಮಕ್ಕಳಿಗೆ ಹಿಂದಿನಂತೆ ಕಷ್ಟವಿಲ್ಲ. ಇರುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಉನ್ನತ ಸ್ಥಾನಮಾನ ಪಡೆಯಬೇಕು. ಶಿಕ್ಷಣ ಹಾಗೂ ಸಂಘಟನೆಯಿಂದ ಬಲಯುತರಾಗಬೇಕು. ರಾಜಕೀಯವಾಗಿಯೂ ಕೂಡ ಸಮಾಜ ಒಂದಾಗಿ ಗಟ್ಟಿ ನಿರ್ಣಯ ಕೈಗೊಳ್ಳಬೇಕು ಎಂದರು.

ಗೃಹ ಸಚಿವರ ಆಪ್ತ ಕಾರ್ಯದರ್ಶಿ ಕೆ. ಚನ್ನಬಸಪ್ಪ ಮಾತನಾಡಿ, ನಾವ್ಯಾರಿಗೂ ಕಡಿಮೆಯಿಲ್ಲ. ಆದರೆ ನಮ್ಮಲ್ಲಿ ಹಿಂದುಳಿದವರು ಎಂಬ ಹಿಂಜರಿಕೆ ಜಾಸ್ತಿಯಾಗಿದೆ. ಜತೆಗೆ ಸಮಾಜ ಕೂಡ ಪ್ರತಿಭೆಗಳ ಹಿಂದೆ ನಾವಿದ್ದೇವೆ ಎಂಬ ಸಂದೇಶ ತಲುಪಿಸಬೇಕು. ಒಳ್ಳೆ ಶಿಕ್ಷಣ ಹಾಗೂ ರಾಜಕೀಯ ಪ್ರಾತಿನಿಧ್ಯದಿಂದ ಮಾತ್ರ ಪ್ರಬಲವಾಗಲು ಸಾಧ್ಯ.‌ ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಶ್ರದ್ಧೆ ಹಾಗೂ ಬದ್ಧತೆಯಿಂದ ತೊಡಗಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಉತ್ತರ ಕನ್ನಡ ಜಿಲ್ಲೆಯ ನಾಮಧಾರಿ ಸಮಾಜದ ಮೊದಲ ಶಿಕ್ಷಕಿ ಗೌರಿ ಗೋಪಾಲ ನಾಯ್ಕ, ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸುವ ಜತೆಗೆ ಎಸ್.ಎಸ್.ಎಲ್‌.ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಸಂಘದ ತಾಲೂಕಾ ಅಧ್ಯಕ್ಷ ಜಿ‌.ಐ.ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜೇಶ ನಾಯ್ಕ, ಸಮಾಜದ ಪ್ರಮುಖರಾದ ಕೆ.ಜಿ.ನಾಗರಾಜ, ಬಿ.ಆರ್.ನಾಯ್ಕ, ವಿ.ಎನ್.ನಾಯ್ಕ, ನಾಗರಾಜ ನಾಯ್ಕ ಬೇಡ್ಕಣಿ, ವಸಂತ ನಾಯ್ಕ, ಸುಧೀರ ನಾಯ್ಕ ಕೊಂಡ್ಲಿ, ರವಿಕುಮಾರ ನಾಯ್ಕ, ಪ್ರಶಾಂತ ಜಿ.ಎಸ್., ಇಂದಿರಾ ನಾಯ್ಕ, ಗೋಪಾಲ ನಾಯ್ಕ ಭಾಶಿ, ವಿನಾಯಕ ನಾಯ್ಕ ದೊಡ್ಡಗದ್ದೆ, ಆರ್.ಆರ್.ನಾಯ್ಕ, ಉಮೇಶ ಟಪಾಲ, ಜೆ.ಆರ್.ನಾಯ್ಕ, ರವಿ ಕೆ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಉಪ ತಹಶೀಲ್ದಾರ ಜಿ.ಎಲ್.ಶ್ಯಾಮಸುಂದರ ಸ್ವಾಗತಿಸಿದರು. ಎಂ.ಜಿ.ನಾಯ್ಕ, ಮೋಹಿನಿ ಕೆ ಹಾಗೂ ಅಕ್ಕಮ್ಮ ನಾಯ್ಕ ನಿರೂಪಿಸಿದರು.