ಸುದ್ದಿಬಿಂದು ಬ್ಯೂರೋ
ಕುಮಟಾ : ಅಯೋಧ್ಯೆಯ ರಾಮಮಂದಿರದಲ್ಲಿ (Ayodhya’s Ram Mandir) ಮರ್ಯಾದಾ ಪುರುಷೋತ್ತಮ ಶ್ರೀರಾಮ ಪ್ರಾಣಪ್ರತಿಷ್ಠೆ(Sri Rama Pranapratistha) ನಾಳೆ ನಡೆಯಲಿದ್ದು, ದೇಶವೇ ಅತ್ತ ಚಿತ್ತ ಹರಿಸುತ್ತಿದೆ.ಈ ವಿಶೇಷ ಸಂದರ್ಭದಲ್ಲಿ ಪಟ್ಟಣ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸರಸ್ವತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ವಿಶೇಷವಾದ ರೀತಿಯಲ್ಲಿ ರಾಮವಂದನೆ ಸಲ್ಲಿಸಿದ್ದಾರೆ.

300ವಿದ್ಯಾರ್ಥಿಗಳು ಸೇರಿ ಸರತಿ ಸಾಲಿನಲ್ಲಿ ನಿಂತು ಸಂಸ್ಕೃತ ಭಾಷೆಯಲ್ಲಿ ‘ಜಯ ಶ್ರೀರಾಮ’ ಎಂಬುದಾಗಿ ಬರೆದಿದ್ದಾರೆ. ಜೊತೆಯಲ್ಲಿ ಕೋದಂಡ ರಾಮನ ಬಿಲ್ಲು ಬಾಣವನ್ನು ರಚಿಸುವ ಮೂಲಕ ರಾಮವಂದನೆಯನ್ನು ಸಲ್ಲಿಸಿ,ಎಲ್ಲರಿಗೂ ಕಾಣುವಂತೆ ಶ್ರೀರಾಮ ಎಂಬುದಾಗಿ ಬರೆಯುವ ಮೂಲಕ ವಿವಿಧ ಭಂಗಿಗಳನ್ನು ಪ್ರದರ್ಶಿಸಿ ಗಮನ ಸೆಳೆದರು.

ವಿದ್ಯಾರ್ಥಿಗಳು ರಾಮ ಭಜನೆ ಮಾಡುತ್ತಾ ಸರತಿ ಸಾಲಿನಲ್ಲಿ ಬಂದು, ಜಯ ಶ್ರೀರಾಮ ಎಂಬುದಾಗಿ ನಿಲ್ಲುತ್ತಿದ್ದ ದೃಶ್ಯ ವಿಶೇಷವಾಗಿ ಸೆರೆಯಾಗಿದೆ. ಫುಲ್ ಫ್ರೇಮ್ ಫೋಟೋಗ್ರಾಫಿಯ ಗಜು ಹೆಗಡೆ ವಿದ್ಯಾರ್ಥಿಗಳ ಈ ವಿಶೇಷ ರಾಮವಂದನೆಯ ದೃಶ್ಯವನ್ನು ತಮ್ಮ ಡ್ರೋನ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಮಕ್ಕಳ ಈ ವಿಶೇಷ ಪ್ರಯತ್ನ ಇದೀಗ ಸಾಮಾಜಿಕ ಜಾಲತಾಣದಲ್ಲಿಯೂ ಫುಲ್ ವೈರಲ್ ಆಗಿದೆ.

ವಿದ್ಯಾರ್ಥಿಗಳು ವಿಶೇಷ ಕಾರ್ಯಕ್ರಮದ ಭಾಗವಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮಕ್ಕೆ ಮಾರ್ಗದರ್ಶನ ಮಾಡಿದ ಶಿಕ್ಷಕರ ಬಗ್ಗೆಯೂ ಪ್ರಶಂಸೆ ವ್ಯಕ್ತವಾಗಿದೆ.