ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳು ಮತ್ತೆ ಹೆಚ್ಚಳವಾಗುತ್ತಿರುವ ಹಾಗೂ ಬೆಂಗಳೂರಿನಲ್ಲಿ ಕೋವಿಡ್‌ನಿಂದಾಗಿ ಕಳೆದ ಮೂರು ದಿನಗಳಲ್ಲಿ ಮೂವರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯದ ಸ್ಥಿತಿಗತಿಯ ಕುರಿತು ಚರ್ಚಿಸಲು ಹಾಗೂ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಲು ಇಂದು ಉನ್ನತ ಮಟ್ಟದ ಸಭೆ ನಡೆಸಿದ ಸಿಎಂ ಮಾಹಿತಿ ನೀಡಿದ್ದಾರೆ.
ಕೋವಿಡ್ 19ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗುತ್ತಿದೆ. ಅದರಲ್ಲೂ JN.1ಎಂಬ ಹೊಸ ತಳಿಯ ವೈರಸ್ ಪತ್ತೆಯಾಗಿದೆ. ಕಳೆದ ಒಂದು ವಾರದ ಅವಧಿಯಲ್ಲಿ ಜಾಗತಿಕವಾಗಿ 51,214 ಪ್ರಕರಣಗಳು ಪತ್ತೆಯಾಗಿವೆ. ಭಾರತದಲ್ಲಿ ಪ್ರತಿದಿನ ಸರಾಸರಿ 310 ಪ್ರಕರಣಗಳು ವರದಿಯಾಗುತ್ತಿವೆ.ಕರ್ನಾಟಕದಲ್ಲಿ ಪ್ರಸ್ತುತ 92 Active COVID Cases ವರದಿಯಾಗಿವೆ. ಕೇರಳದಲ್ಲಿ 2041, ತಮಿಳು ನಾಡಿನಲ್ಲಿ 77, ಮಹಾರಾಷ್ಟ್ರದಲ್ಲಿ 35, ಗೋವಾದಲ್ಲಿ 23 ಹಾಗೂ ಗುಜರಾತಿನಲ್ಲಿ 12 Active cases ಇವೆ.
ರಾಜ್ಯದಲ್ಲಿರುವ ಒಟ್ಟು 92 Active COVID Case ಗಳಲ್ಲಿ 80 ಬೆಂಗಳೂರು ನಗರದಲ್ಲಿ ಇದೆ. ಉಳಿದಂತೆ ಮೈಸೂರಿನಲ್ಲಿ 5, ಬಳ್ಳಾರಿಯಲ್ಲಿ 3, ರಾಮನಗರ ಹಾಗೂ ಮಂಡ್ಯದಲ್ಲಿ ತಲಾ 1 ಪ್ರಕರಣ ವರದಿಯಾಗಿದೆ.ಇವರಲ್ಲಿ 72 ಜನ ಮನೆಯಲ್ಲಿಯೇ ಪ್ರತ್ಯೇಕವಾಗಿದ್ದಾರೆ. (Home Isolation). 20 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಏಳು ಜನರು ಐಸಿಯುನಲ್ಲಿದ್ದು, ಇವರೆಲ್ಲರೂ ಇತರ ಸಮಸ್ಯೆಗಳಿಂದಲೂ ಬಳಲುತ್ತಿದ್ದಾರೆ.ರಾಜ್ಯದಲ್ಲಿ ಕೋವಿಡ್ ಪರೀಕ್ಷಾ ಪ್ರಮಾಣವನ್ನು ದಿನಕ್ಕೆ 5000 ಕ್ಕೆ ಹೆಚ್ಚಿಸಲಾಗಿದೆ. ಇದರಲ್ಲಿ 1500 Rapid Antigen Test ಹಾಗೂ 3500 RTPCR ಪರೀಕ್ಷೆಗಳಾಗಿವೆ. ಬೆಂಗಳೂರು ನಗರದಲ್ಲಿ 1000 ಪರೀಕ್ಷೆಗಳನ್ನು ನಡೆಸಲಾಗುವುದು. ಗಡಿ ಭಾಗಗಳಲ್ಲಿ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗುವುದು.
ಕರ್ನಾಟಕದಲ್ಲಿ ಡಿಸೆಂಬರ್ 15 ರಂದು ಒಂದು ಹಾಗೂ ಡಿಸೆಂಬರ್ 20 ರಂದು ಎರಡು ಸಾವುಗಳು ಸಂಭವಿಸಿವೆ. ಈ ಮೂರು ಪ್ರಕರಣಗಳಲ್ಲಿ ಎಲ್ಲರೂ ಇತರ ಆರೋಗ್ಯ ಸಮಸ್ಯೆಗಳಿಂದ (Co-Morbidity) ಬಳಲುತ್ತಿದ್ದರು.ಅದಾಗ್ಯೂ ಜನರು ಆತಂಕ ಪಡುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮಗಳನ್ನು ಅಗತ್ಯವಾಗಿ ಕೈಗೊಳ್ಳಬೇಕಾಗಿದೆ. ಕೋವಿಡ್ 19 ಈಗ Pandemic ಆಗಿ ಉಳಿದಿಲ್ಲ. Endemic ಆಗಿದೆ. ಸರ್ಕಾರವೂ ಸಹ ಎಲ್ಲ ಅಗತ್ಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಿದೆ. ಮೃತರಾದವರು, Co-morbidity ಇರುವವರು, ಒಂದೇ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ಪ್ರಕರಣಗಳು ವರದಿಯಾದ ಸಂದರ್ಭದಲ್ಲಿ, ವಿದೇಶ ಪ್ರಯಾಣದ ಹಿನ್ನೆಲೆ ಹೊಂದಿದವರ ಜಿನೋಮ್ ಸಿಕ್ವೆನ್ಸಿಂಗ್ ಮಾಡಲಾಗುತ್ತಿದೆ.
ತಾಂತ್ರಿಕ ಸಲಹಾ ಸಮಿತಿಯು ನೀಡಿರುವ ಸಲಹೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಅದರಂತೆ ಈ ಕೆಳಕಂಡ ತೀರ್ಮಾನಗಳನ್ನು ಕೈಗೊಳ್ಳಲಾಯಿತು.ಹಿಂದಿನ ಕೋವಿಡ್ ಅಲೆಗಳ ಸಂದರ್ಭದಲ್ಲಿ ನಡೆದ ತಪ್ಪುಗಳು ಈ ಬಾರಿ ಆಗಬಾರದು. ಆಕ್ಸಿಜನ್, ವೆಂಟಿಲೇಟರ್, ಬೆಡ್‌ಗಳು ಯಾವುದಕ್ಕೂ ತೊಂದರೆ ಆಗಬಾರದು. ಕಳೆದ ಬಾರಿ ತೊಂದರೆ ಆಗಿ ಹಲವಾರು ಜನ ಮೃತಪಟ್ಟರು. ಆಕ್ಸಿಜನ್ ಲಭ್ಯತೆಯನ್ನು ಖಾತರಿ ಪಡಿಸಬೇಕು.ಇದಕ್ಕೆ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳು ಸನ್ನದ್ಧವಾಗಿ ಇವು ಯಾವುದೂ ಕೊರತೆಯಾಗದಂತೆ ನೋಡಿಕೊಳ್ಳಬೇಕು.ತಾಂತ್ರಿಕ ಸಲಹಾ ಸಮಿತಿಯ ಸಲಹೆಗಳನ್ನು ಪಾಲಿಸಬೇಕು.
ಎಲ್ಲರೂ ಜವಾಬ್ದಾರಿ ಅರಿತು ಕೆಲಸ ಮಾಡಬೇಕು.
ಕೋವಿಡ್ ನ ಸಮರ್ಪಕ ನಿರ್ವಹಣೆ ಹಾಗೂ ಪಾರದರ್ಶಕತೆಗಾಗಿ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಯಿತು.ಎಲ್ಲ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ಮಾಡಲಾಗಿದೆ.ಎಲ್ಲ ಆಸ್ಪತ್ರೆಗಳೂ ಕೋವಿಡ್ ಪ್ರಕರಣಗಳನ್ನು ನಿರ್ವಹಿಸಲು ಸಿದ್ಧತೆ ನಡೆಸಿಕೊಳ್ಳಲು ಸೂಚಿಸಲಾಗಿದೆ.
ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳು ಹಾಗೂ ರಾಜ್ಯದಲ್ಲಿ ಹೊರಡಿಸಿರುವ ಮಾರ್ಗಸೂಚಿಗಳು 60 ವರ್ಷ ಮೇಲ್ಪಟ್ಟ ಎಲ್ಲರೂ, ಕಿಡ್ನಿ, ಹೃದಯ, ಲಿವರ್ ಸಮಸ್ಯೆಗಳಿಂದ ಬಳಲುತ್ತಿರುವವರು, ಗರ್ಭಿಣಿ ಹಾಗೂ ಬಾಣಂತಿಯರು ಮಾಸ್ಕ್ ಧರಿಸುವುದು ಹಾಗೂ ಮುಚ್ಚಿದ, ಹೆಚ್ಚು ಗಾಳಿಯಾಡದ ಸ್ಥಳಗಳಿಗೆ ಹಾಗೂ ಜನಸಂದಣಿ ಇರುವ ಸ್ಥಳಗಳಿಗೆ ಭೇಟಿ ನೀಡದೆ ಇರುವುದು. ಉಸಿರಾಟದ ಸಮಸ್ಯೆಯ ಲಕ್ಷಣಗಳಾದ ಜ್ವರ, ಕೆಮ್ಮು, ಶೀತ, ನೆಗಡಿ ಇತ್ಯಾದಿಗಳಿಂದ ಬಳಲುತ್ತಿರುವವರು ಕೂಡಲೇ ವೈದ್ಯಕೀಯ ಸಮಾಲೋಚನೆ ನಡೆಸುವುದು ಹಾಗೂ ಮಾಸ್ಕ್ ಧರಿಸುವುದು.
ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡುವುದು. ಅನಾರೋಗ್ಯ ಪೀಡಿತರಾದರೆ ಮನೆಯಲ್ಲೇ ಇರಿ ಹಾಗೂ ಇತರರೊಂದಿಗೆ ಸಂಪರ್ಕವನ್ನು ಕಡಿಮೆ ಮಾಡಿ.ಜನಸಂದಣಿಯ ಪ್ರದೇಶದಲ್ಲಿ ಮಾಸ್ಕ್ ಧರಿಸುವುದು ಉತ್ತಮ.ವಿದೇಶ ಪ್ರವಾಸದ ಸಂದರ್ಭದಲ್ಲಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕಿದೆ.
ಭಾರತ ಸರ್ಕಾರವೂ ಮಾರ್ಗಸೂಚಿಗಳನ್ನು ಹೊರಡಿಸಿದೆ.
ರಾಜ್ಯವೂ ಕೇರಳ ಮತ್ತು ತಮಿಳು ನಾಡು ಗಡಿ ಭಾಗದಲ್ಲಿ ಜ್ವರದ ಪ್ರಕರಣಗಳ ಮೇಲೆ ನಿಗಾ ವಹಿಸಿ, ಪರೀಕ್ಷೆ ಮತ್ತು ವರದಿ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ.ಎಲ್ಲ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಉಸಿರಾಟದ ತೊಂದರೆ ಮತ್ತು 20 ರಲ್ಲಿ 1 ಜ್ವರ (ILI) ದ ಪ್ರಕರಣಗಳಲ್ಲಿ ಪರೀಕ್ಷೆ ಕಡ್ಡಾಯವಾಗಿ ಮಾಡಲು ಸೂಚಿಸಿದೆ.