ಸುದ್ದಿಬಿಂದು ಬ್ಯೂರೋ
ಕಾರವಾರ : ಕರಾವಳಿ ಭಾಗದಲ್ಲಿ ಕಾಗೆ ಕಾ… ಕಾ… ರಾಗ ಹಾಡಿದ ಮೇಲೆಯೇ ಬೆಳಗಾಯಿತು ಎನ್ನುವುದು ರೂಡಿ. ಆದರೆ ಉ. ಕ. ಜಿಲ್ಲೆಯ ಕದ್ರಾ-ಮಲ್ಲಾಪುರದಲ್ಲಿ ಹಾಗಲ್ಲ. ಇಲ್ಲಿ ನಿತ್ಯ “ಕಾಗೆ” ಕಾ… ಕಾ… ಹಾಡುವ ಮುನ್ನ, “ಕೋಳಿ” ಕೂಗುವ ಮುನ್ನ, “ರವಿ” ಉದಯಿಸುವ ಮುನ್ನವೇ ಯಾವ ಬ್ರಹ್ಮ, ವಿಷ್ಣುವಿನ ಭಯವಿಲ್ಲದೆ ಮಟ್ಕಾ‌ ಲಿಸ್ಟ್ ಆರಂಭವಾಗುತ್ತಿದೆ ಎನ್ನುವ ಮಾತು ಜೋರಾಗೇ ಕೇಳಿ ಬರುತ್ತಿದೆ.

*ರವಿ” ಉದಯಿಸುವ ಮುನ್ನವೇ ಮಟ್ಕಾ ಲಿಸ್ಟ್ ಆರಂಭವಾಗುತ್ತಿತ್ತಂತೆ. ಈಗ ಕದ್ರಾ-ಮಲ್ಲಾಪುರ ಕಡೆ “ರವಿ” ಉದಯಿಸುತ್ತಿದ್ದಾನಂತೆ.ಈ ಬಗ್ಗೆ ಪ್ರಜ್ಞಾವಂತ ನಾಗರಿಕರು ಅದೆಷ್ಟೋ ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೂ ತಂದಿದ್ದಾರಂತೆ. ಆದರೆ ಏನೂ ಪ್ರಯೋಜನವಾಗಿಲ್ಲ ಎಂದು ಜನ ನೊಂದು ಹೇಳುತ್ತಿದ್ದಾರೆ.

ಕದ್ರಾದಲ್ಲಿ ನಿತ್ಯವೂ ಉದಯಿಸುವ ಈ ರವಿ‌‌ (ಸೂರ್ಯ)ಗೆ ಯಾವ ಬ್ರಹ್ಮ-ವಿಷ್ಟುವಿನ ಭಯವಿಲ್ಲವಂತೆ, ನಾನು ಉದಯಿಸಿದರೆ ಮಾತ್ರ ಉಳಿದವರು ಬೆಳಕು ಕಾಣ ಬೇಕು ಎನ್ನುವ ಅಹಂಕಾರ ತುಂಬಿಕೊಂಡಿದೆಯಂತೆ.

ತಾನು ಬ್ರಹ್ಮ, ವಿಷ್ಣು ಈ ಎಲ್ಲಾ ದೇವಾನು-ದೇವತೆಗಳಿಗೆ ಹರಕೆ, ಕಾಣಿಕೆ ಎಲ್ಲವನ್ನು ನೀಡಿಯೇ ಕದ್ರಾ ಮಲ್ಲಾಪುರದಲ್ಲಿ ನಿತ್ಯ ಉದಯಿಸುತ್ತೇನೆ ಎಂದು ರವಿ ಹೇಳುತ್ತಾನಂತೆ. ನಿಜವಾಗಲ್ಲೂ ಆ ಬ್ರಹ್ಮ, ವಿಷ್ಣುಗಳಿಗೆ ಈತ ಆಟ ಗೊತ್ತಿದ್ದರೆ ಕದ್ರಾದಲ್ಲಿ ರವಿ ಉದಯಿಸಲು ಅವಕಾಶ ನೀಡಲು ಸಾಧ್ಯವೆ ಅಂತಿದ್ದಾರೆ ಅಲ್ಲಿನ ಜನ.

ಕದ್ರಾ‌‌ ಹಾಗೂ‌ ಮಲ್ಲಾಪುರ ಭಾಗದಲ್ಲಿ ಹೆಚ್ಚಾಗಿ ಸ್ಥಳೀಯರಿಗಿಂತ ಉದ್ಯೋಗಕ್ಕಾಗಿ ಹೊರ‌ ರಾಜ್ಯದಿಂದ ಬಂದು ನೆಲೆಸಿರುವವರೆ ಹೆಚ್ಚಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಬೆಳಿಗ್ಗೆ ‌ರವಿ ಉದಯಿಸುವ ಮುನ್ನವೇ ಆರಂಭವಾಗುವ ಮಟ್ಕಾ ಲಿಸ್ಟ್ ಗೆ ತಾವು ದುಡಿದ ಹಣವನ್ನೆಲ್ಲಾ ಸುರಿದು, ತಮ್ಮಲ್ಲಿದ್ದ‌‌ ಅಲ್ಪ-ಸ್ವಲ್ಪ ಚಿನ್ನಾಭರಣವನ್ನು ಕಳೆದುಕೊಂಡು ಬೀದಿಗೆ ಬಂದು ನಿಂತಿದ್ದಾರೆ ಎಂದು ಕಾರ್ಮಿಕರ ಮನೆಯ ಹೆಂಗಸರು ಅಂಗಡಿಕಾರರಲ್ಲಿ ಗೋಗರೆಯುತ್ತಿದ್ದಾರೆ.

ಇಲ್ಲಿನ ಮಟ್ಕೋದ್ಯಮಿಗೆ ಎಷ್ಟು ಅಹಂಕಾರವೆಂದರೆ “ಕಾಸು ಕೊಟ್ಟರೆ ನಾನು ರವಿ ಉದಯಿಸುವ ಮೊದಲು ಎಲ್ಲಿ ಬೇಕೆಂದರಲ್ಲಿ ನನ್ನ ಆಟ ಆರಂಭಿಸುತ್ತೇನೆ” ಎಂದು ಹೇಳುತ್ತಾನಂತೆ!

ಮಟ್ಕಾದಲ್ಲೇ ಮಿಂದೇಳುವ ಸೂರ್ಯನಿಗೆ ಈ ಬ್ರಹ್ಮ, ವಿಷ್ಣು, ಮಹೇಶ್ವರರು ಕಡಿವಾಣ ಹಾಕದಿದ್ದರೆ… ಬಡ ಕೂಲಿ ಕಾರ್ಮಿಕರ ರಕ್ತ ಹೀರುವ ಈ ಅಪಾಯಕಾರಿ ಮಟ್ಕಾ ವೈರಸ್ ಮುಂದೆ ಇಡೀ ಜಿಲ್ಲೆಗೆ ಮಾರಕವಾಗಲಿದೆ ಎನ್ನುವುದು ಜಿಲ್ಲೆಯ ಸಂಭಾವಿತರ ಅಭಿಪ್ರಾಯ.