ಕಾರವಾರ: ಆಡಳಿತ ಪಕ್ಷದ ಜನಪ್ರತಿನಿಧಿಗಳು ಉಸ್ತುವಾರಿ ಸಚಿವರ ಹಾಗೂ ಐ ಆರ್ ಬಿ ಯ ನಡುವಿನ ಮುಸುಕಿನ ಗುದ್ದಾಟದಿಂದಾಗಿ ಕಾರವಾರದ ಸಾರ್ವಜನಿಕರಿಗೆ ರಾಷ್ಟ್ರೀಯ ಹೆದ್ದಾರಿ 66 ಕ್ಕೆ ಹೊಂದಿಕೊಂಡಂತೆ ಕಾರವಾರ ನಗರದ ಪ್ರವೇಶ ಭಾಗದಲ್ಲಿ ಹಳೆಯ ಲಂಡನ್ ಬ್ರಿಜ್ ಇರುವಲ್ಲಿ ಸುರಂಗ ಮಾರ್ಗವನ್ನು ಉಪಯೋಗಿಸಲು ಸಾಧ್ಯವಾಗದೇ ಇರುವುದು ಖಂಡನೀಯವಾಗಿದೆ ಎಂದು ವಿಧಾನಪರಿಷತ್‌ನ ಶಾಸಕರಾದ ಗಣಪತಿ ಉಳ್ವೇಕರ ತಿಳಿಸಿದ್ದಾರೆ.
ಆಡಳಿತ ಪಕ್ಷದ ಸ್ಥಳೀಯ ಶಾಸಕ ಸತೀಶ್ ಸೈಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ಎಸ್ ವೈದ್ಯ ಅವರು ಈ ಸುರಂಗವನ್ನು ಸಾರ್ವಜನಿಕರ ಉಪಯೋಗಕ್ಕೆ ತೆರವು ಗೊಳಿಸದೇ ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ತೆಗೆದುಕೊಂಡಿದ್ದು,ಸುರಕ್ಷತಾ ಕಾರಣದಿಂದಾಗಿ ಸುರಂಗವನ್ನು ಮುಚ್ಚಿದ್ದಾರೆ ಎಂಬ ಸಬೂಬು ಹೇಳುತ್ತಿದ್ದಾರೆ. ಈ ಭಾಗದಿಂದ ಪ್ರತಿದಿನ ಸಾವಿರಾರು ಸ್ಥಳೀಯ ನಿವಾಸಿಗಳು ಹಾಗೂ ದೊಡ್ಡ ಪ್ರಮಾಣದ ಪ್ರವಾಸಿಗಳು ತೆರಳುತ್ತಿದ್ದು ಸುರಂಗವನ್ನು ಮುಚ್ಚಿರುವುದರಿಂದ 3-4 ಕಿಲೋಮೀಟರ್ ಸುತ್ತಿ ಬರಬೇಕಾಗಿದೆ.
ತಾವೇ ಉದ್ಘಾಟಿಸಿದ ಸುರಂಗವನ್ನು ಸ್ಥಳೀಯ ಶಾಸಕರು ಈಗ ಸುರಕ್ಷತೆಯ ದೃಷ್ಟಿಯಿಂದ ಸರಿ ಇಲ್ಲ ಎಂದು ಹೇಳುತ್ತಿರುವುದು ಸರಿಯಲ್ಲ.ಈ ಭಾಗದ ಜನಪ್ರತಿನಿಧಿಯಾಗಿ ಪ್ರತಿದಿನ ಸಾರ್ವಜನಿಕರಿಂದ ಈ ಬಗ್ಗೆ ನನಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸುರಂಗವನ್ನು ತಕ್ಷಣ ಸಾರ್ವಜನಿಕರು ಉಪಯೋಗಕ್ಕಾಗಿ ತೆರವುಗೊಳಿಸಬೇಕು .
ಜಿಲ್ಲಾಡಳಿತ ಹಾಗೂ ಸರ್ಕಾರ ಈ ಅವ್ಯವಸ್ಥೆಗೆ ಜವಾಬ್ದಾರಿಯಾಗಿದ್ದು ಸಾರ್ವಜನಿಕರ ಸಂಯಮದ ಕಟ್ಟೆ ಈಗ ಒಡೆಯುತ್ತಿದೆ. ಹೀಗಾಗಿ ಒಂದು ವಾರದ ಒಳಗಾಗಿ ಈ ಸುರಂಗವನ್ನು ಮತ್ತೆ ಸಾರ್ವಜನಿಕರ ಉಪಯೋಗಕ್ಕಾಗಿ ತೆರವುಗೊಳಿಸಬೇಕು. ಜಿಲ್ಲಾಧಿಕಾರಿಗಳು ಯಾವುದೇ ರಾಜಕಾರಣಿಗಳ ಒತ್ತಡಕ್ಕೆ ಮಣಿಯದೆ ಕ್ರಮ ಕೈಗೊಳ್ಳಬೇಕು.
ಇಂದಿನಿಂದ ಒಂದು ವಾರದ ಒಳಗಾಗಿ ಈ ಸುರಂಗವನ್ನು ತೆರವುಗೊಳಿಸದಿದ್ದರೆ ಸಪ್ಟೆಂಬರ್ 29ರಂದು ನಾನೇ ಮುಂದಾಗಿ ನಿಂತು ಸಾರ್ವಜನಿಕರ ಸಹಕಾರದಿಂದ ಈ ಸುರಂಗ ಮಾರ್ಗವನ್ನು ಸಾರ್ವಜನಿಜನಿಕರ ಉಪಯೋಗಕ್ಕಾಗಿ ತೆರವುಗೊಳಿಸುತ್ತೇನೆ. ಆಗ ಯಾವುದಾದರೂ ಕಾನೂನು ಮತ್ತು ಸುವ್ಯಸ್ಥೆಯ ಸಮಸ್ಯೆ ಉಂಟಾದರೆ ಅದಕ್ಕೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಶಾಸಕರೇ ಹೊಣೆ.
ಸೆ 29ರಂದ ಸುರಂಗವನ್ನು ನಾವು ಸಾರ್ವಜನಿಕರ ಉಪಯೋಗಕ್ಕಾಗಿ ತೆರವುಗೊಳಿಸಿಯೇ ಸಿದ್ಧ. ಅದಕ್ಕಾಗಿ ಯಾವುದೇ ಸ್ಥಿತಿಯನ್ನು ಎದುರಿಸಲು ನಾವು ಸಿದ್ಧರಿದ್ದು ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಣಯಕ್ಕೆ ಬರಲಾಗಿದೆ. ಹೀಗಾಗಿ ಸ್ಥಳೀಯ ಆಡಳಿತ ಹಾಗೂ ಐಆರ್ ಬಿ ಮತ್ತು ಜನಪ್ರತಿನಿಧಿಗಳು ತಕ್ಷಣ ಕ್ರಮ ಕೈಗೊಂಡು ಇದನ್ನು ಈ ವಾರದಲ್ಲಿ ತೆರವು ಗೊಳಿಸಲೇಬೇಕು ಇಲ್ಲದಿದ್ದರೆ ಮುಂದಿನ ಪರಿಣಾಮಕ್ಕೆ ಸಿದ್ದರಾಗಿರಬೇಕು ಎಂದು ಗಣಪತಿ ಉಳ್ವೇಕರ್ ತಿಳಿಸಿದ್ದಾರೆ.