ಸುದ್ದಿಬಿಂದು ಬ್ಯೂರೋ
ಕುಮಟಾ : ತಾಲೂಕಿನ ಹಂದಿಗೋಣ ಗ್ರಾಮದ ನಾರಾಯಣ ಭಾಗವತಿ ಅವರು ಶಿರಸಿಯ ಮಾರಿಕಾಂಬ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಕನ್ನಡ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು ಅವರಿಗೆ ಈ ಬಾರಿಯ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದ್ದು ಕರ್ನಾಟಕದ ಇಬ್ಬರಿಗೆ ಮಾತ್ರ ಈ ಪ್ರಶಸ್ತಿ ಲಭಿಸಿದ್ದು, ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿಕ್ಷಕರಾದ ಭಾಗವತರಿಗೆ ಲಭಿಸಿದೆ.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹಂದಿಗೋಣದಲ್ಲಿ ಮೇ 16 ,1968 ರಲ್ಲಿ ಜನಿಸಿದ ನಾರಾಯಣ ಪಿ. ಭಾಗ್ವತ್ ರವರು ಪ್ರಸ್ತುತ ಶಿರಸಿಯ ಶ್ರೀ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಎ., ಎಂ.ಇಡಿ. ಪದವೀಧರರಾಗಿರುವ ಇವರು ರಂಗ ಶಿಕ್ಷಣದಲ್ಲಿ ಡಿಪ್ಲೊಮಾ ಮಾಡಿದ್ದಾರೆ.
ಕತೆ-ಕವನ-ನಾಟಕ ರಚನೆ ,ಚಿತ್ರಕಲೆ , ಸಂಗೀತ,ನಾಟಕ ನಿರ್ದೇಶನ ಮತ್ತು ಅಭಿನಯ , ಉಪನ್ಯಾಸ , ರಜಾಶಿಬಿರಗಳ ಸಂಘಟನೆ , ಪೇಪರ್ ಕ್ರಾಫ್ಟ್ , ಹಾರ್ಮೋನಿಯಂ ವಾದನ , ನಾಟಕದ ವೇಷಭೂಷಣ ಮತ್ತು ವರ್ಣಾಲಂಕಾರ,ಯಕ್ಷಗಾನ , ಕರಕುಶಲ ಕಲೆ , ವಾಸ್ತು ಜ್ಞಾನ..ಹೀಗೆ ಬಹುಮುಖಿ ಪ್ರತಿಭೆಯ ಇವರು ಸದಾ ಹಸನ್ಮುಖಿಗಳು. ಸಮಭಾವ – ಸದ್ಭಾವದೊಂದಿಗೆ ಎಲ್ಲರೊಂದಿಗೆ ಬೆರೆಯುವ ಸ್ನೇಹಜೀವಿ. ಬಹುತ್ವದ ನೆಲೆಯಲ್ಲಿ ತೆರೆದುಕೊಂಡ ಇವರಿಗೆ ಜನಗಣತಿಯ ಉತ್ತಮ ಕಾರ್ಯನಿರ್ವಹಣೆಗಾಗಿ ರಾಷ್ಟ್ರಪತಿಗಳ ಬೆಳ್ಳಿ ಪದಕ , ಕನ್ನಡ ರತ್ನ ಶಿಕ್ಷಕ ಪ್ರಶಸ್ತಿ , ಸುವರ್ಣ ಸಂಭ್ರಮ ಶಿಕ್ಷಕ ಪ್ರಶಸ್ತಿ , ಅತ್ಯುತ್ತಮ ಮಕ್ಕಳ ನಾಟಕ ನಿರ್ದೇಶಕ ಪ್ರಶಸ್ತಿ , ಅತ್ಯುತ್ತಮ ನಟ ,ತಾಲೂಕು ಮತ್ತು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ , ರಾಜ್ಯ ಜ್ಞಾನ ಸಿಂಧು ಪ್ರಶಸ್ತಿ , ನೇಶನ್ ಬ್ಯುಲ್ಡರ್ ಪ್ರಶಸ್ತಿ , ಕ.ಸಾ.ಪ. ತಾಲೂಕು ಪ್ರಶಸ್ತಿ , ರಾಜ್ಯ ಸಿರಿ ಕನ್ನಡ ನುಡಿ ಪ್ರಶಸ್ತಿ , ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ , ರಾಷ್ಟ್ರಮಟ್ಟದ ಉತ್ತಮ ನಾಟಕ ನಿರ್ದೇಶಕ ಪ್ರಶಸ್ತಿಯೂ ಸೇರಿದಂತೆ ಹತ್ತಾರು ಪ್ರಶಸ್ತಿ – ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ.
ನೂರಾರು ಸಂಘ-ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿವೆ. ಇದೀಗ ಇವರ ಮುಡಿಗೆ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯ ಕಿರೀಟ. ಭಾಗ್ವತ್ ಗುರುಗಳಿಗೆ ಶುಭ ಹಾರೈಸುತ್ತ ಅವರಿಗೆ ಇನ್ನಷ್ಟು ಗೌರವಾದರಗಳು ದೊರೆಯುವಂತಾಗಲೆಂದು ಆಶಿಸುತ್ತೇನೆ.