ಸುದ್ದಿಬಿಂದು ಬ್ಯೂರೋ
ಕಾರವಾರ
: ಉತ್ತರ ಕನ್ನಡ ಜಿಲ್ಲಾಧಿಕಾರಿಯಾದ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ವರ್ಗಾವಣೆಯಾಗಿದ್ದು,(DC transfer)ತೆರವಾದ ಇವರ ಸ್ಥಾನಕ್ಕೆ ಈ ಹಿಂದೆ ಕುಮಟಾ ಸಹಾಯಕ ಕಮಿಷನರ್ ಆಗಿದ್ದ ದಕ್ಷ ಮಹಿಳಾ ಅಧಿಕಾರಿಯಾಗಿರುವ ಗಂಗೂಬಾಯಿ ರಮೇಶ್ ಮಾನಕರ್ ಅವರನ್ನು ನೇಮಕ ಮಾಡಿ ಸರಕಾರ ಆದೇಶಿಸಿದೆ.

2012ನೇ ಸಾಲಿನ ಐಎಎಸ್ ಬ್ಯಾಚ್ (IAS Officer)ಅವರಾದ ಗಂಗೂಬಾಯಿ (DC Gangubai Manakar) ಈ ಹಿಂದೆ ಕುಮಟಾ ಸಹಾಯಕ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದರು‌. ಈಗ ಅವರು ಈ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ನಿಯುಕ್ತಿಯಾಗಿರುವುದು ಜಿಲ್ಲೆಯ ಜನರಲ್ಲಿ ಅಭಿವೃದ್ಧಿಯ ಹೊಸ ನಿರೀಕ್ಷೆ ಮೂಡುವಂತಾಗಿದೆ.

ವರ್ಗಾವಣೆಗೆ ಪಟ್ಟು ಹಿಡಿದಿದ್ದ ಶಾಸಕ

ಈ ಹಿಂದೆ ಗುಂಗೂಬಾಯಿ ಮಾನಕರ್ ಅವರು ಕುಮಟಾ ಸಹಾಯಕ ಕಮಿಷನರ್ ಆಗಿದ್ದಾಗ ಅಂದು ಜೆಡಿಎಸ್ ಶಾಸಕರಾಗಿದ್ದ ದಿನಕರ ಶೆಟ್ಟಿ ಅವರಿಗೆ ಗಂಗೂಬಾಯಿ ಮಾನಕರ್ ಅವರು ಧ್ವಜಾರೋಹಣ ಮಾಡಲು ಅವಕಾಶ ನೀಡಿರಲಿಲ್ಲ‌‌‌. ಇದೇ ಕಾರಣಕ್ಕೆ ಕುಮಟಾ ಶಾಸಕರು ಕ್ಷೇತ್ರದಲ್ಲಿನ ಉಳಿದ ಎಲ್ಲಾ ವಿಚಾರವನ್ನು ಬಿಟ್ಟು ಅಧಿವೇಶನದ ವೇಳೆ ಸದನದ ಬಾವಿಗೆ ಇಳಿದು ಓರ್ವ ದಕ್ಷ ಮಹಿಳಾ ಅಧಿಕಾರಿ ಅವರನ್ನು ವರ್ಗಾವಣೆ ಮಾಡುವಂತೆ ಹೋರಾಟ ಮಾಡಿ ಅವರನ್ನು ಜಿಲ್ಲೆಯಿಂದಲೇ ವರ್ಗಾವಣೆ ಮಾಡಿಸುವಲ್ಲಿ ಶಾಸಕರು ಯಶಸ್ವಿಯಾಗಿದ್ದರು.ಅಂದು ಶಾಸಕರ ಹೋರಾಟದಿಂದ ವರ್ಗಾವಣೆಗೊಂಡಿದ್ದ ಅಂದಿನ ಕುಮಟಾ ಸಹಾಯಕ ಕಮಿಷನರ್ ಇಂದು ಜಿಲ್ಲಾಧಿಕಾರಿಯಾಗಿ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ್ದಾರೆ.

ಪರಿಸರ ಸ್ನೇಹಿ ಅಧಿಕಾರಿ

ಪರಿಸರ ಸ್ನೇಹಿ ಅಧಿಕಾರಿಯೂ ಆಗಿರುವ ಗಂಗೂಬಾಯಿ ಅಂದು ಕುಮಟಾದಲ್ಲಿ ಮಣ್ಣುಗಳ್ಳರ ಅಟ್ಟಹಾಸವನ್ನು ಮಟ್ಟಹಾಕಿದ್ದರು. ಅಂದಿನ ಪುರಸಭಾ ಸದಸ್ಯನೊಬ್ಬನ ಬುಲ್ಡೋಜರನ್ನೇ ಗಂಗೂಬಾಯಿ ಮಾನಕರ್ ಅವರು ಮುಟ್ಟುಗೋಲು ಹಾಕಿ ತಾನೊಬ್ಬ ಖಡಕ್ ಅಧಿಕಾರಿ ಎಂದು ಮಾನಕರ್ ಸಾಬೀತು ಪಡಿಸಿದ್ದರು.ಇಂತಹ ರಫ್ & ಟಫ್ ಅಧಿಕಾರಿ ಜಿಲ್ಲೆಗೆ ಡಿಸಿ ಆಗಿ ಬಂದಿರುವುದು ಜಿಲ್ಲೆಯ ಅಕ್ರಮಕೋರರ ನಿದ್ದೆ ಗೆಡಿಸುವುದು ಸುಳ್ಳಲ್ಲ.

ಐಆರ್ಬಿಗೆ ಮುಳುಗುನೀರು
ಜಿಲ್ಲೆಯ ಕರಾವಳಿ ಭಾಗದಲ್ಲಿ ರಸ್ತೆ ವ್ಯವಸ್ಥೆ ತೀರಾ ಹದಗೆಟ್ಟಿರುವುದು ಮತ್ತು ಐಆರ್ಬಿ ಕಂಪನಿಯ ಹಗಲು ದರೋಡೆ ಎಲ್ಲರಿಗೂ ಗೊತ್ತಿರುವ ವಿಚಾರ. ಸಾಧಾರಣ ಮಳೆಗೂ ಕೆಲವೆಡೆ ಹೆದ್ದಾರಿ ಮುಳುಗುತ್ತಿದ್ದು, ಇದೀಗ ಬಂದಿರುವ ಖಡಕ್ ಅಧಿಕಾರಿ ಐಆರ್ಬಿ ಕಂಪನಿಗೆ ಮುಳುಗು ನೀರು ತಂದರೂ ಅಚ್ಚರಿಯಿಲ್ಲ!

ಸರಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳು ವೈದ್ಯರು ಗಟ್ಟಿ ಮನಸ್ಸು ಮಾಡಿ ಮಾನಕರ್ ಅವರನ್ನು ಜಿಲ್ಲೆಯಲ್ಲಿ ಒಂದಿಷ್ಟು ವರ್ಷ ಇಟ್ಟುಕೊಂಡರೆ ಜಿಲ್ಲೆ ಅಭಿವೃದ್ಧಿ ಪಥದತ್ತ ಸಾಗಬಹುದು ಎನ್ನುವುದು ಬಹುತೇಕರ ನಿರೀಕ್ಷೆಯಾಗಿದೆ.