ಸುದ್ದಿಬಿಂದು ನ್ಯೂಸ್
ಕುಮಟಾ
: ರಾಜ್ಯದ ಕೆಎಸ್ಸಾರ್ಟಿಸಿ ಗೋಕರ್ಣ-ಬೆಂಗಳೂರು ಪ್ರಯಾಣದ ಐರಾವತ ಬಸ್ಸಿನ ಮಾರ್ಗವನ್ನು ಬೇಕಾಬಿಟ್ಟಿ ಬದಲಾಯಿಸಿದ ಕಾರಣ ಪ್ರಯಾಣಿಕರು ಸಂಕಟ ಅನುಭವಿಸಿದ ಘಟನೆ ಮಂಗಳವಾರ ಕುಮಟಾ ಬಸ್ ನಿಲ್ದಾಣದಲ್ಲಿ ನಡೆದಿದೆ. ರಾಜ್ಯದ ಪ್ರತಿಷ್ಟಿತ ಐರಾವತ ಬಸ್ಸುಗಳಲ್ಲೇ ಹೀಗಾದರೆ ಪ್ರಯಾಣಿಕರ ಪಾಡೇನು? ಎನ್ನುವ ಪ್ರಶ್ನೆಯೂ ಈಗ ಎದುರಾಗಿದೆ.

ಕುಮಟಾದ ವಿನಾಯಕ ಜಿ. ಎನ್. ಎನ್ನುವವರು ದಂಪತಿ ಸಹಿತ ಮಂಗಳವಾರ ಬೆಂಗಳೂರಿಗೆ ಹೊರಡಲೆಂದು ಸೋಮವಾರ ತಡರಾತ್ರಿ 1 ಗಂಟೆ ಸುಮಾರಿಗೆ ಕೆಎಸ್ಸಾರ್ಟಿಸಿಯ ಪ್ರತಿಷ್ಟಿತ ಬಸ್ಸಾದ ಐರಾವತಕ್ಕೆ 2 ಟಿಕೆಟ್ ಬುಕ್ ಮಾಡಿದ್ದರು. ರಾತ್ರಿ 8ರಿಂದ 8.30ರ ಮಧ್ಯದ ಅವಧಿಯಲ್ಲಿ 3 ಐರಾವತ ಬಸ್ ಕುಮಟಾದಿಂದ ಬೆಂಗಳೂರಿಗೆ ಹೊರಡುತ್ತದೆ. ಅದರಲ್ಲಿ ಎರಡು ಬಸ್ ಹೊನ್ನಾವರ ಮಾರ್ಗವಾಗಿ, ಒಂದು ಬಸ್ ಶಿರಸಿ, ಸಿದ್ದಾಪುರ, ಸಾಗರ ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತದೆ. ವಿನಾಯಕ ಅವರ ಪತ್ನಿ ಹೊನ್ನಾವರದಲ್ಲಿದ್ದ ಕಾರಣ ಅವರನ್ನು ಹೊನ್ನಾವರದಲ್ಲೇ ಪಿಕಪ್ ಮಾಡಬಹುದು ಎನ್ನುವ ಉದ್ದೇಶದಿಂದ ವಿನಾಯಕ ಅವರು ಹೊನ್ನಾವರ ಮಾರ್ಗದ ಬಸ್ಸಿಗೆ ಕುಮಟಾದಿಂದ 2 ಟಿಕೆಟ್ ಬೆಂಗಳೂರಿಗೆ ಹೋಗಲು ಬುಕ್ ಮಾಡಿದ್ದರು. ಆದರೆ ಕೆಎಸ್ಸಾರ್ಟಿಸಿ ಬಸ್ ಡ್ರೈವರ್ ಮತ್ತು ಕಂಡಕ್ಟರ್ ಸೇರಿ ಹೊನ್ನಾವರ ಮಾರ್ಗದ ಬಸ್ಸಿಗೆ ಟಿಕೆಟ್ ಬುಕ್ ಆಗಿಲ್ಲ ಎನ್ನುವ ಕಾರಣ ನೀಡಿ ಆ ಮಾರ್ಗಕ್ಕೆ ಬಸ್ ಬಿಡದೇ ಬೇರೆ ಮಾರ್ಗದ ಬಸ್ಸಿಗೆ ಹೋಗುವಂತೆ ವಿನಾಯಕ ಅವರಿಗೆ ಸೂಚಿಸಿದ್ದಾರೆ. ಆದರೆ ವಿನಾಯಕ ಅವರ ಪತ್ನಿ ಬಸ್ ಬರುತ್ತದೆಂದು ಹೊನ್ನಾವರದಲ್ಲಿ ಕಾಯುತ್ತಿದ್ದು, ಬಸ್ ಬರುವುದಿಲ್ಲವೆಂದು ಗೊತ್ತಾಗಿ ಗಾಬರಿಗೊಂಡಿದ್ದಾರೆ. ಕೆಎಸ್ಸಾರ್ಟಿಸಿ ಅವರು ಮಾರ್ಗ ಬದಲಾವಣೆ ಬಗ್ಗೆ ಪ್ರಯಾಣಿಕರಿಗೆ ಯಾವುದೇ ಮಾಹಿತಿ ನೀಡದಿದ್ದರೂ, ತಮ್ಮ ತಪ್ಪನ್ನು ಒಪ್ಪದೆ ಬಸ್ ಡ್ರೈವರ್ ಮತ್ತು ಕಂಡಕ್ಟರ್ ಪ್ರಯಾಣಿಕರ ಜೊತೆ ಅಸಭ್ಯವಾಗಿ ಮಾತಾಡಿದ್ದಲ್ಲದೇ ಉದ್ಧಟತನದಿಂದ ವರ್ತಿಸಿದ್ದಾರೆ. ರಾಜ್ಯದ ಪ್ರತಿಷ್ಟಿತ ಐರಾವತ ಬಸ್ಸುಗಳಲ್ಲೇ ಹೀಗಾದರೆ ಪ್ರಯಾಣಿಕರ ಪಾಡೇನು ಎನ್ನುವುದು ಸ್ಥಳದಲ್ಲಿ ನೆರೆದಿದ್ದ ನಾಗರಿಕರ ಪ್ರಶ್ನೆ.

ಬೆಂಗಳೂರಿಗೆ ಬುಕ್ ಮಾಡಿದ ಪ್ರಯಾಣಿಕರು ಬಸ್ಸಿಗಾಗಿ ಹೊನ್ನಾವರದಲ್ಲಿ ಕಾಯುತ್ತಿದ್ದಾರೆ ಎಂದು ಗೊತ್ತಾದ ಮೇಲೂ ಚಾಲಕ ಪ್ರಯಾಣಿಕರನ್ನು ಬಿಟ್ಟು ಬೆಂಗಳೂರಿಗೆ ಹೊರಡಲು ಅನುವಾದಾಗ ಪ್ರಯಾಣಿಕರಾದ ವಿನಾಯಕ ಮತ್ತು ಸ್ಥಳದಲ್ಲಿ ನೆರೆದಿದ್ದ ಜನರು ಕೆಎಸ್ಸಾರ್ಟಿಸಿ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ಬೇರೆ ದಾರಿಯಿಲ್ಲದೆ ಪ್ರಯಾಣಿಕ ವಿನಾಯಕ ಎಂಬವರು ಕುಮಟಾದಿಂದ ಆಟೋ ಕಳುಹಿಸಿ ಹೊನ್ನಾವರದಲ್ಲಿರುವ ತನ್ನ ಪತ್ನಿಯನ್ನು ಕುಮಟಾ ಬಸ್ ನಿಲ್ದಾಣಕ್ಕೆ ಕರೆಸಿಕೊಂಡಿದ್ದಾರೆ. ಕೆಎಸ್ಸಾರ್ಟಿಸಿಯವರು ಮಾಡಿದ ಅವಾಂತರಕ್ಕೆ ಪ್ರಯಾಣಿಕರು ಹೈರಾಣಾಗಬೇಕಾಯಿತು. ಅಂತೂ ಅರ್ಧ ಗಂಟೆ ಬಳಿಕ ವಿನಾಯಕ ದಂಪತಿ ಅದೇ ಬಸ್ಸಲ್ಲಿ ಬೆಂಗಳೂರಿಗೆ ಪ್ರಯಾಣಿಸಿದ್ದಾರೆ.

ಜಾರಿಕೊಂಡ ಕುಮಟಾ ಅಧಿಕಾರಿಗಳು

ಐರಾವತ ಬಸ್ ಮಾರ್ಗ ಬದಲಾದ ಬಗ್ಗೆ ಕುಮಟಾ ನಿಲ್ದಾಣದಲ್ಲಿದ್ದ ಬಸ್ ಕಂಟ್ರೋಲರ್ ಗಮನಕ್ಕೆ ತಂದಾಗ ಕಂಟ್ರೋಲರ್ ಸಮರ್ಪಕ ಉತ್ತರ ನೀಡದೆ ಟಿಕೆಟ್ ಬುಕ್ಕಿಂಗ್ ಕೌಂಟರಲ್ಲಿ ವಿಚಾರಿಸಿ ಎಂದಷ್ಟೇ ಹೇಳಿ ಜಾರಿಕೊಂಡಿದ್ದಾರೆ. ಟಿಕೆಟ್ ಬುಕ್ಕಿಂಗ್ ಕೌಂಟರಲ್ಲಿದ್ದ ಸಿಬ್ಬಂದಿಗೆ ಈ ವಿಷಯ ಹೇಳಿದಾಗ ಆತ ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ತಲೆಯಾಡಿಸಿ ಕೌಂಟರ್ ಬಂದ್ ಮಾಡಿ ಹೋಗಿದ್ದಾರೆ. ಈ ಬಗ್ಗೆ ಕುಮಟಾದ ಡಿಪೋ ಮ್ಯಾನೇಜರ್ ಮತ್ತು ವಿಭಾಗೀಯ ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕೆಂದು ಪ್ರಯಾಣಿಕ ವಿನಾಯಕ ಆಗ್ರಹಿಸಿದ್ದಾರೆ. ಪದೇ ಪದೇ ಬೆಂಗಳೂರಿಗೆ ಪ್ರಯಾಣಿಸುವ ನನ್ನ ಪರಿಸ್ಥಿತಿಯೇ ಹೀಗಾದರೆ ಏನೂ ಅರಿಯದ ಗ್ರಾಮಾಂತರ ಭಾಗದ ಮುಗ್ಧ ಜನರ ಸ್ಥಿತಿ ಹೇಗಿರಬೇಡ ಎಂದು ವಿನಾಯಕ ಪ್ರಶ್ನಿಸಿದ್ದಾರೆ.

ಬಾಕಿ ಮೊತ್ತ ಪಾವತಿಸದ ಕೆಎಸ್ಸಾರ್ಟಿಸಿ

ಗೋಕರ್ಣದಿಂದ ಹೊನ್ನಾವರ ಮಾರ್ಗವಾಗಿ ಬೆಂಗಳೂರಿಗೆ ಹೋಗುವ ಬಸ್ಸಿನ ಪ್ರಯಾಣ ದರಕ್ಕೂ ಗೋಕರ್ಣದಿಂದ ಶಿರಸಿ ಮಾರ್ಗವಾಗಿ ಬೆಂಗಳೂರಿಗೆ ಹೋಗುವ ಬಸ್ಸಿನ ಪ್ರಯಾಣ ದರಕ್ಕೂ ವ್ಯತ್ಯಾಸವಿದೆ. ಪ್ರಯಾಣಿಕ ವಿನಾಯಕ ಅವರು ಹೊನ್ನಾವರ ಮಾರ್ಗದ ಬಸ್ಸಿಗೆ ಹೆಚ್ಚು ಪ್ರಯಾಣ ದರ ಪಾವತಿಸಿ ಟಿಕೆಟ್ ಬುಕ್ ಮಾಡಿದ್ದರು. ಆದರೆ ಇವರನ್ನು ಶಿರಸಿ ಮಾರ್ಗದ ಬಸ್ಸಿನಲ್ಲಿ ಬೆಂಗಳೂರಿಗೆ ತಲುಪಿಸಿದ್ದು, ಇವರು ಪಾವತಿಸಿದ ಹೆಚ್ಚುವರಿ ಮೊತ್ತವನ್ನು ಕೆಎಸ್ಸಾರ್ಟಿಸಿ ಅವರು ರಿಫಂಡ್ ಮಾಡಿಲ್ಲ. ಈ ಬಗ್ಗೆ ವಿನಾಯಕ ಅವರು ಕೆಎಸ್ಸಾರ್ಟಿಸಿ ಹೆಲ್ಪ್ ಲೈನ್ ಮೂಲಕ ದೂರು ನೀಡಿದ್ದಾರೆ. ತಮಗಾದ ತೊಂದರೆ ಬಗ್ಗೆ ಮೇಲಾಧಿಕಾರಿಗೆ ದೂರು ನೀಡುತ್ತೇನೆಂದು ತಿಳಿಸಿದ್ದು, ನ್ಯಾಯ ಸಿಗದಿದ್ದರೆ ಗ್ರಾಹಕರ ವೇದಿಕೆಯ ಮೊರೆ ಹೋಗಬೇಕಾಗುತ್ತದೆ ಎಂದು ತಿಳಿಸಿದ್ದಾರೆ.