ಭಟ್ಕಳ : ಹಿಂದುತ್ವದ ಪ್ರತಿಪಾದಕ ಸಿ. ಟಿ. ರವಿ ಹಾಗೂ ಸ್ಥಳೀಯ ಶಾಸಕರಾಗಿದ್ದ ಸುನೀಲ್ ನಾಯ್ಕ ಮಾಂಸ ಸೇವಿಸಿ ನಾಗಬನಕ್ಕೆ ಭೇಟಿ ನೀಡಿದ್ದೆ ಅವರಿಬ್ಬರ ಸೋಲಿಗೆ ಕಾರಣವಾಯ್ತಾ ಎನ್ನುವ ಬಗ್ಗೆ ಇದೀಗ ಚರ್ಚೆ ನಡೆಯುತ್ತಿದೆ.

ಚುನಾವಣಾ ಘೋಷಣೆಗೂ ಮೊದಲು ಸಿ. ಟಿ. ರವಿ ಅವರು ಕಾರವಾರದಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದರು. ಬಳಿಕ ಅವರು ಕಾರವಾರದಿಂದ ಭಟ್ಕಳಕ್ಕೆ ತೆರಳಿ ಅಲ್ಲಿನ ಬಿಜೆಪಿ ಶಾಸಕ ಸುನೀಲ್ ನಾಯ್ಕ ಅವರ ಮನೆಗೆ ಭೇಟಿ ನೀಡಿ ಮಾಂಸದೂಟ ಮಾಡಿ ನಾಗದೇವಾಲಯಕ್ಕೆ ಹೋಗಿ ಕೈ ಮುಗಿದು ಬಂದಿದ್ದರು. ಸುನೀಲ್ ನಾಯ್ಕ ಅವರ ಮನೆಯಲ್ಲಿ ಸಿ. ಟಿ. ರವಿ ಮಾಂಸದೂಟ ಮಾಡಿ ನಂತರದಲ್ಲಿ ದೇವಸ್ಥಾನಕ್ಕೆ ಹೋಗಿದ್ದ ಪೋಟೋ ಸಹ ವೈರಲ್ ಆಗಿತ್ತು. ಸಿ. ಟಿ. ರವಿ ಮಾಂಸ‌ ಸೇವಿಸಿ ದೇಗುಲಕ್ಕೆ ಭೇಟಿ ನೀಡಿದ ಬಗ್ಗೆ ವಿರೋಧ ಪಕ್ಷದ ನಾಯಕರು ಸಹ ಸಿ. ಟಿ. ರವಿ ವಿರುದ್ಧ ಹರಿಹಾಯ್ದಿದ್ದರು.

ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಮಾಂಸ ಸೇವಿಸಿ ದೇವರ ದರ್ಶನ ಪಡೆದಾಗ ದೊಡ್ಡ ಕೂಗು ಎಬ್ಬಿಸಿದ ಇದೇ ಸಿ. ಟಿ. ರವಿ ಇಡೀ ರಾಜ್ಯದ ತುಂಬೆಲ್ಲ ಓಡಾಡಿ ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದರು.

ಇದೇ ಸಿ. ಟಿ. ರವಿ ಇತ್ತೀಚೆಗೆ ಭಟ್ಕಳದಲ್ಲಿ ಮಾಂಸ ಸೇವಿಸಿ ದೇಗುಲದ ದರ್ಶನ ಪಡೆದಾಗ ಕಾಂಗ್ರೆಸ್ ನಾಯಕರು ದೇವರು ನೋಡಿಕೊಳ್ತಾನೆ ಎಂಬಂತೆ ಮೌನಕ್ಕೆ ಶರಣಾಗಿದ್ದರು. ಈಗ ಸಿ. ಟಿ. ರವಿ ಹಿನ್ನಡೆ ನೋಡಿದರೆ ಮಾಂಸ ಸೇವಿಸಿ ದೇವರ ದರ್ಶನ ಮಾಡಿದ್ದು ತಪ್ಪಾಯ್ತಾ ಎನ್ನುವ ಅನುಮಾನ ಉಂಟಾಗಿದೆ.

ಭಟ್ಕಳದಲ್ಲಿ ಮಾಂಸ ಸೇವಿಸಿ ದೇಗುಲದ ದರ್ಶನ ಪಡೆದ ಸಿ. ಟಿ. ರವಿ ಹಾಗೂ ಸುನೀಲ್ ನಾಯ್ಕ ಇಬ್ಬರೂ ಚುನಾವಣೆಯಲ್ಲಿ ಸೋತಿದ್ದಾರೆ.

ಮಾಂಸ ಸೇವನೆ ಮಾಡಿ ದೇವಸ್ಥಾನಕ್ಕೆ ಹೋಗಿರುವುದೇ ಇಬ್ಬರಿಬ್ಬರೂ ಅಧಿಕಾರ ಕಳೆದುಕೊಳ್ಳಲು ಕಾರಣವಾಗಿರಬಹುದು ಎನ್ನುವ ಮಾತು ಜೋರಾಗಿ ಕೇಳಿ ಬರುತ್ತಿದೆ.

ಯಾವುದಕ್ಕೂ ಈ ಇಬ್ಬರು ಒಮ್ಮೆ ತಮ್ಮ ಸೋಲಿನ ಬಗ್ಗೆ ಬಿಜೆಪಿಯ ಚಾಣಾಕ್ಷ ಪುರೋಹಿತರಾದ ಸಂತೋಷ್ ಜೀ ಅವರನ್ನು ಭೇಟಿ ಮಾಡಿ‌ ನಾಗ ದೋಷದ ಪರಿಹಾರದ ಬಗ್ಗೆ ಚರ್ಚಿಸಿವುದು ಒಳ್ಳೆಯದು ಎಂದು ಅನೇಕ ಜನರು ವ್ಯಂಗ್ಯವಾಡುತ್ತಿದ್ದಾರೆ.