ಸುದ್ದಿಬಿಂದು ಬ್ಯೂರೋ
ಕುಮಟಾ :
ಇಲ್ಲಿಯ ಬಾಳಿಗಾ ಕಾಲೇಜಿನಲ್ಲಿ ಮಂಗಳವಾರ ನಡೆದ ಒಂದು ದಿನದ ಚುನಾವಣಾ ತರಬೇತಿ ಶಿಬಿರದಲ್ಲಿ ಮಧ್ಯಾಹ್ನ ಕಳಪೆ ಊಟ ಪೂರೈಸಿದ್ದರಿಂದ ನಿಯೋಜಿತ ನೂರಾರು ಚುನಾವಣಾ ಸಿಬ್ಬಂದಿಗಳು ಹಿಡಿಶಾಪ ಹಾಕುತ್ತಾ ಮನೆಗೆ ಹೋಗಿದ್ದಾರೆ ಎನ್ನುವ ಬಗ್ಗೆ ಚರ್ಚೆ ಆಗುತ್ತಿದೆ.

ಕುಮಟಾ ಮಾತ್ರವಲ್ಲದೇ ಜಿಲ್ಲೆಯ ಬೇರೆ ಬೇರೆ ತಾಲೂಕುಗಳಿಂದ ‌ನಿಯೋಜಿತ ಚುನಾವಣಾ ಸಿಬ್ಬಂದಿಗಳು ದೂರ ದೂರದಿಂದ ನಸುಕಿನ ನಾಲ್ಕೈದು ಗಂಟೆಗೇ ಎದ್ದು ನಿಗದಿಪಡಿಸಲಾದ ಸಾರಿಗೆ ಬಸ್ ನಲ್ಲಿ ಕ ಸಮಯಕ್ಕೆ ಸರಿಯಾಗಿ ಬಂದು ಕುಮಟಾ ತಲುಪಿದ್ದರು. ಎಲ್ಲರೂ ಸಹಜವಾಗಿಯೇ ಸುಸ್ತಾಗಿ ಬಸವಳಿದಿದ್ದರು. ತರಬೇತಿಯ ಮಧ್ಯಂತರದಲ್ಲಿ ಊಟ ನೀಡಲಾಗಿತ್ತು. ಈ ಊಟ ಎಷ್ಟು ಕಳಪೆಯಾಗಿತ್ತು ಅಂದರೆ ಗಂಟು ಕಟ್ಟಿಕೊಂಡ ಅಕ್ಕಿಯಿಂದ ಮಾಡಿದ ಅನ್ನ, ಉಪ್ಪು ಖಾರ ಇಲ್ಲದ ತೋವೆ, ಹೆಸರು ಕಾಳಿನ ಕಾಟಾಚಾರದ ಸಾರು‌, ರುಚಿಯಿಲ್ಲದ ಹಪ್ಪಳ ನೀಡಿದ್ದರು.

ನೂರಾರು ಪ್ಯಾಕೆಟ್ ಮೊಸರು ತಂದು ದೊಡ್ಡ ಬಾಣಲೆಯಲ್ಲಿ ಸುರಿದು ಅದಕ್ಕೆ ಕೊಡಗಟ್ಟಲೆ ನೀರು ಬೆರೆಸಿ, ಉಪ್ಪು ಕೂಡ ಹಾಕದೇ ಅದನ್ನೇ ಮಜ್ಜಿಗೆ ಅಂತ ಚುನಾವಣಾ ಸಿಬ್ಬಂದಿಗಳಿಗೆ ನೀಡಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ‘ಸುದ್ದಿಬಿಂದು’ ಪ್ರತಿನಿಧಿಗೆ ತಿಳಿಸಿದ್ದಾರೆ. ವ್ಯಗ್ರಗೊಂಡ ಚುನಾವಣಾ ಸಿಬ್ಬಂದಿಗಳು ತಮಗೆ ಇಂಥ ಊಟ ಕೊಡಲು ತಾವೇನು ಭಿಕ್ಷುಕರಾ? ಎಂದು ಪ್ರಶ್ನಿಸಿದ್ದಾರೆ. ಆದರೆ ಕೊಟ್ಟ ಕಳಪೆ ಊಟವನ್ನೇ ಉಂಡು ಹಿರಿಯ ಅಧಿಕಾರಿಗಳನ್ನು ಪ್ರಶ್ನಿಸಲು ಭಯಗೊಂಡು ತೆಪ್ಪಗೆ ಮನೆ ದಾರಿ ಹಿಡಿದಿದ್ದು ಭ್ರಷ್ಠ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

ಚುನಾವಣಾ ಆಯೋಗ ಚುನಾವಣಾ ಪ್ರಕ್ರಿಯೆಯನ್ನು ಸುವ್ಯವಸ್ಥಿತವಾಗಿ ನಡೆಸಲು ನಿರ್ದೇಶನ ನೀಡಿರುತ್ತದೆ. ಅದರಂತೆ ಸರಕಾರ ಲಕ್ಷಾಂತರ ಹಣ ವೆಚ್ಚ ಮಾಡುತ್ತದೆ. ಈ ವೆಚ್ಚದಲ್ಲಿ ಒಳ್ಳೆಯ ಊಟ ಕೊಡಲು ಕೂಡ ಹೆಚ್ಚಿನ ಹಣ ಬಿಡುಗಡೆ ಮಾಡಲಾಗಿರುತ್ತದೆ. ಅದರೆ ಇಲ್ಲಿ ಹಿರಿಯ ಅಧಿಕಾರಿಗಳು ಕಳಪೆ ಊಟ ನೀಡಿ ನಿಯೋಜಿತ ಚುನಾವಣಾ ಸಿಬ್ಬಂದಿಗಳನ್ನು ನಿಕೃಷ್ಟವಾಗಿ ಕಾಣಲಾಗಿದೆ ಎಂದು ಬಾಳಿಗಾ ಕಾಲೇನಲ್ಲಿ ಚುನಾವಣೆ ತರಬೇತಿಗಾಗಿ ಬಂದ
ಸಿಬ್ಬಂದಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ‌.

ಈ ಹಿನ್ನೆಲೆಯಲ್ಲಿ ಸರಕಾರ ಚುನಾವಣೆಗಾಗಿ ಉತ್ತರ ಕನ್ನಡ ಜಿಲ್ಲೆಗೆ ಎಷ್ಟು ಅನುದಾನ ನೀಡಿದೆ ಮತ್ತು ಅದರಲ್ಲಿ ಸಿಬ್ಬಂದಿಗಳ ಊಟಕ್ಕಾಗಿ ಎಷ್ಟು ಹಣ ಮೀಸಲಾಗಿಡಲಾಗಿದೆ ಎಂಬುದನ್ನು ತನಿಖೆ ಮಾಡಬೇಕು ಮಾತ್ರವಲ್ಲ, ಸಾರ್ವಜನಿಕರಿಗೆ ಪತ್ರಿಕಾಗೋಷ್ಠಿ ಮೂಲಕ ತಿಳಿಸಬೇಕು ಎಂದು ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ‌.