ಸುದ್ದಿ ಬಿಂದು ನ್ಯೂಸ್ ಡೆಸ್ಕ್
ಕುಮಟಾ :
ಉತ್ತರ ಕನ್ನಡ ಜಿಲ್ಲೆಯ ಜನರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಕನಸು ನನಸಾಗಲೇ ಇಲ್ಲ. ಕೊನೆಗೂ ಜಿಲ್ಲೆಯ ಜನರಿಗೆ ಉತ್ತರ ಮರೀಚಿಕೆಯಾಗೇ ಉಳಿಯಿತು.

ದಶಕದ ಹಿಂದೆ ಒಂದು ಸುದ್ದಿ ಜಿಲ್ಲೆಯಾದ್ಯಂತ ಹರಡಿತ್ತು. ರಾತ್ರಿ ಹೊತ್ತಲ್ಲಿ ಭೂತ ಬಂದು ಮನೆ ಬಾಗಿಲು ಬಡಿಯುತ್ತದೆ. ಬಾಗಿಲು ತೆರೆದರೆ ಮನೆಮಂದಿ ರಕ್ತ ಕಾರಿ ಸಾಯುತ್ತಾರೆ ಎಂಬುದು ಆ ಸುದ್ದಿಯ ಸಾರಾಂಶವಾಗಿತ್ತು. ಇದನ್ನು ಕೇಳಿದ ಜಿಲ್ಲೆಯ ಸಾವಿರಾರು ಜನ ತಮ್ಮ ಮನೆಯ ಬಾಗಿಲಿಗೆ ನಾಳೆ ಬಾ' ಎಂದು ಬರೆದಿದ್ದರು. ಇದೀಗ ಜಿಲ್ಲೆಯ ಜನರ ಪರಿಸ್ಥಿತಿ ಕೂಡ ಹೀಗೇ ಆಗಿದೆ. ಮುಖ್ಯಮಂತ್ರಿ ಕುಮಟಾಕ್ಕೆ ಇಂದು ಬರ್ತಾರೆ, ನಾಳೆ ಬರ್ತಾರೆ ಎಂದು ಕಾದಿದಷ್ಟೇ ಬಂತು. ಆದರೆ ಮುಖ್ಯಮಂತ್ರಿ ಬರಲೇ ಇಲ್ಲ. ಈ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕೂಡ ಜಿಲ್ಲೆಯ ಜನಕ್ಕೆನಾಳೆ ಬಾ’ ಎನ್ನುವಂತಾಗಿದೆ.

ಜಿಲ್ಲೆಗೆ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವ ಬಗ್ಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಜನರು ಹಲವಾರು ರೀತಿಯ ಹೋರಾಟ, ಅಭಿಯಾನ ನಡೆಸಿದ್ದರು. ಸರಕಾರ ಬಾಯ್ಬಿಡದೆ ಇದ್ದ ಸಂದರ್ಭದಲ್ಲಿ ಜಿಲ್ಲೆಯ ಜನ ಈ ಬಾರಿಯ ಚುನಾವಣಾ ಬಹಿಷ್ಕಾರದ ಬಗ್ಗೆ ಎಚ್ಚರಿಕೆ ನೀಡಿದ್ದರು. ಇದರಿಂದ ಬೆಚ್ಚಿಬಿದ್ದ ಸರಕಾರ ಹಿಂದೆ ಮುಂದೆ ನೋಡದೆ ಬೀಸೊ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಸರಿಯಾದ ಸ್ಥಳ, ಆಸ್ಪತ್ರೆಗೆ ಬೇಕಾಗುವ ಖರ್ಚು ವೆಚ್ಚದ ಲೆಕ್ಕ ಮಾಡದೆ ಆಸ್ಪತ್ರೆ ನಿರ್ಮಾಣ ಮಾಡೆ ಬಿಟ್ಟ ರೀತಿಯಲ್ಲಿ ಘೋಷಣೆ ಮಾಡಿ ಚುನಾವಣಾ ಬಹಿಷ್ಕಾರದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿತ್ತು.

ಹೋರಾಟದ ಬಿಸಿ ಜೋರಾದಂತೆ ಆರೋಗ್ಯ ಸಚಿವರು ಜಿಲ್ಲೆಗೆ ಆಗಮಿಸಿ ಕಾಟಾಚಾರಕ್ಕೆ ಸ್ಥಳ ಪರಿಶೀಲನೆ ಮಾಡಿ ಬೆಂಗಳೂರಿಗೆ ಹೋಗಿದ್ದರು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕುಮಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ತನ್ನ ಕ್ಷೇತ್ರದಲ್ಲಿ ಆಸ್ಪತ್ರೆ ನಿರ್ಮಾಣ ಮಾಡೇ ಬಿಟ್ಟೆ ಎನ್ನುವ ರೀತಿಯಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವ ಸಾಕಷ್ಟು ಪ್ರಯತ್ನ ಮಾಡಿದ್ದರು. ಅದು ಈಗ ಸಫಲವಾಗಿಲ್ಲ. ಇವರ ರಾಜಕೀಯ ಕೇವಲ ಬಜೆಟ್ ರಾಜಕೀಯಕ್ಕಷ್ಟೇ ಸೀಮಿತವಾಯಿತು. ಕೊನೆಗೂ ಉತ್ತರ ಕನ್ನಡ ಜಿಲ್ಲೆಯ ಜನರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕನಸು ನನಸಾಗಲೇ ಇಲ್ಲ.