ಕುಮಟಾ : ಇಲ್ಲಿನ ಮಣಕಿ ಮೈದಾನದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಯಾರಿಗೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಶಾಸಕ ದಿನಕರ ಶೆಟ್ಟಿ ತನ್ನ ಸೀಟು ಬಿಟ್ಟು ಕೊಡುವ ಬಗ್ಗೆ ಮಾತಾಡಿದ್ದಾರೆ. ಇದು ಕ್ಷೇತ್ರದ ಮತದಾರರ ಸಹಿತ ಬಿಜೆಪಿ ಕಾರ್ಯಕರ್ತರಲ್ಲೂ ಗೊಂದಲ ಮೂಡಿಸಿದೆ. ಆದರೆ ಕುಮಟಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು ಎನ್ನುವುದು ಇನ್ನೂ ನಿಗೂಢವಾಗೇ ಉಳಿದಿದೆ.

ಬಿಜೆಪಿ ಹೈಕಮಾಂಡಲ್ಲಿ ಈಗಾಗಲೇ ಕುಮಟಾ ಕ್ಷೇತ್ರದ ಗೊಂದಲದ ಬಗ್ಗೆ ಚರ್ಚೆಯಾಗಿದೆ. ಈ ಕ್ಷೇತ್ರದಲ್ಲಿ ಕಾರ್ಯಕರ್ತರೇ ಶಾಸಕ ದಿನಕರ ಶೆಟ್ಟರ ವಿರುದ್ಧ ತಿರುಗಿ ಬಿದ್ದಿರುವುದು ಪಕ್ಷದ ಹೈಕಮಾಂಡಿಗೆ ದೊಡ್ಡ ಸವಾಲಾಗಿದೆ. ಆ ಕಾರಣಕ್ಕೆ ಅಭ್ಯರ್ಥಿ ಆಯ್ಕೆ ಬಗ್ಗೆ ಬಿಜೆಪಿ ಹೈಕಮಾಂಡ್ ಪರ್ಯಾಯದತ್ತ ಮುಖಮಾಡಿದೆ ಎನ್ನಲಾಗುತ್ತಿದೆ.

ಈ ವಾಸನೆ ಬಡಿದ ಕಾರಣಕ್ಕೆ ಶಾಸಕರು ಮಾಧ್ಯಮದವರಲ್ಲಿ ಫೈಯರ್ ಬ್ರ್ಯಾಂಡ್ ಅನಂತಕುಮಾರ್ ಹೆಗಡೆ ಹೆಸರಿನ ಕಾರ್ಡ್ ಬಳಸಿದ್ದಾರೆ. ಈವರೆಗೆ ಹೆಗಡೆ ಹೆಸರೆತ್ತದ ಶಾಸಕ ದಿನಕರ ಶೆಟ್ಟರು ಇದೀಗ ದಿಢೀರ್ ಆಗಿ ಅವರ ಹೆಸರು ಹೇಳಲು ಕಾರಣವೇನು?

ನಾನು ಅನಂತಕುಮಾರ್ ಹೆಗಡೆಯವರ ಅನುಯಾಯಿ, ಅವರು ನನ್ನ ಕ್ಷೇತ್ರ ಬಯಸಿದರೆ ನಾನೇ ಅವರ ಬೆನ್ನಿಗೆ ನಿಂತು ಹೋರಾಡುತ್ತೇನೆ” ಎನ್ನುವ ಅರ್ಥದಲ್ಲಿ ಮಾತಾಡಿ, ಅನಂತಕುಮಾರ್ ಹೆಗಡೆಯವರ ಅಭಿಮಾನಿಗಳನ್ನು ಮತ್ತು ಬ್ರಾಹ್ಮಣ ಸಮುದಾಯದ ಮತದಾರರನ್ನು ಓಲೈಸುವ ಪ್ರಯತ್ನ ಮಾಡಿದ್ದಾರೆ ಎಂದು ಬಿಜೆಪಿಯ ಹಿರಿಯ ಕಾರ್ಯಕರ್ತರೇ ಹೇಳುತ್ತಿದ್ದಾರೆ.

ಒಟ್ಟಾರೆ ಈ ಬಾರಿ ಕುಮಟಾ ಬಿಜೆಪಿ ಟಿಕೆಟ್ ದಿನಕರ ಶೆಟ್ಟರಿಗೆ ಕಗ್ಗಂಟಾಗಲಿದೆಯೇ ಎನ್ನುವುದಕ್ಕೆ ಬಿಜೆಪಿ ಹೈಕಮಾಂಡೇ ಉತ್ತರಿಸಬೇಕಿದೆ.