ಕಾರವಾರ: ತನಗೆ ಜೀವ ಬೆದರಿಕೆ ಇದೆ ಎಂಬ ಶಾಸಕಿ ರೂಪಾಲಿ ನಾಯ್ಕ ಅವರ ಮಾತು ರಾಜ್ಯದಲ್ಲಿ ಕಾನೂನು ಸುವವ್ಯಸ್ಥೆ ತೀರಾ ಹದಗೆಟ್ಟಿದೆಯೇ? ಆಡಳಿತ ಪಕ್ಷದ ಅದರಲ್ಲೂ ಒಬ್ಬ ಮಹಿಳಾ ಶಾಸಕಿಗೆ ಭದ್ರತೆ ನೀಡಲಾರದಷ್ಟು.? ಹೀಗೊಂದು ಪ್ರಶ್ನೆ ಕಾರವಾರ – ಅಂಕೋಲಾ ಕ್ಷೇತ್ರದ ಜನತೆಯ ಮನಸ್ಸಿನಲ್ಲಿ ಉದ್ಭವವಾಗಿದ್ದಂತೂ ಸುಳ್ಳಲ್ಲ.
ಮಾಜಿ ಶಾಸಕ ಸತೀಶ ಸೈಲ್ ಹಾಗೂ ಹಾಲಿ ಶಾಸಕಿ ರೂಪಾಲಿ ನಾಯ್ಕ ಅವರ ನಡುವೆ ಇತ್ತಿಚೇಗೆ ಕಾರವಾರದ ಜಿಲ್ಲಾ ಪಂಚಾಯಿತಿ ಸಿಇಒ ಕಚೇರಿಯಲ್ಲಿ ನಡೆದ ಜಟಾಪಟಿ ಕ್ಷಣಕ್ಷಣಕ್ಕೂ ಕುತೂಹಲಕಾರಿ `ಟ್ವಿಸ್ಟ್’ ಪಡೆದುಕೊಳ್ಳುತ್ತಿದೆ.
ಮೊನ್ನೆ ಶಾಸಕಿ ರೂಪಾಲಿ ನಾಯ್ಕ ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ತನಗೆ ಜೀವ ಬೆದರಿಕೆ ಇದೆ. ಕಾರನ್ನು ಯಾರೋ ಅಪರಿಚಿತರು ಹಿಂಬಾಲಿಸುತ್ತಾರೆ. ಮನೆಯ ಎದುರಿನ ಬೀದಿ ದೀಪ ತೆಗೆದು ಬೆದರಿಸುವ ಕೃತ್ಯ ನಡೆಸಲಾಗುತ್ತಿದೆ ಎಂದು ತಮ್ಮ ಆತಂಕವನ್ನು ಮಾಧ್ಯಮದವರೊಂದಿಗೆ ತಮ್ಮ ಆತಂಕ ತೋಡಿಕೊಂಡಿದ್ದರು.
ಈ ಬಗ್ಗೆ ಈ ಹಿಂದೆಯೂ ಲಿಖಿತ ದೂರು ನೀಡಿದ್ದೆ ಎಂದು ಹೇಳಿದ್ದರು.
ಇದು ನಿಜಕ್ಕೂ ಗಂಭೀರ ವಿಚಾರ. ಒಬ್ಬ ಆಡಳಿತ ಪಕ್ಷದ ಮಹಿಳಾ ಶಾಸಕಿಗೆ ಈ ಪರಿಸ್ಥಿತಿಯಾದರೆ, ಜನಸಾಮಾನ್ಯರ ಪಾಡೇನು? ಶಾಸಕಿ ರೂಪಾಲಿ ನಾಯ್ಕ ಅವರೇ ಹೇಳಿದಂತೆ ಈ ಹಿಂದೆಯೂ ತಮಗೆ ಜೀವ ಬೆದರಿಕೆ ಇದೆ ಎಂಬುದರ ಬಗ್ಗೆ ಪೋಲಿಸ್ ಇಲಾಖೆಗೆ ದೂರು ನೀಡಲಾಗಿತ್ತು. ಆದರೆ ಪೋಲಿಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆ ನಡೆಸಿ, ಈ ಕೃತ್ಯದ ಹಿಂದಿರುವವರನ್ನು ಕಂಬಿ ಹಿಂದೆ ನಿಲ್ಲಿಸಲು ವಿಫಲರಾದರೆ ಎಂಬ ಮಾತು ಸಾರ್ವಜನಿರಿಂದ ಕೇಳಿ ಬರುತ್ತಿದೆ.
ರಾಜ್ಯದ ಶಿವಮೊಗ್ಗ, ಮಂಗಳೂರು ಸೇರಿದಂತೆ ಹಲವೆಡೆ ನಡೆದ ಅಹಿತಕಾರಿ ಘಟನೆಗಳ ಬಗ್ಗೆ ವಿರೋಧ ಪಕ್ಷಗಳ ಮುಖಂಡರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಗೃಹ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದ್ದು, ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ರಾಜೀನಾಮೆಗೂ ಸಹ ಒತ್ತಾಯಿಸಿದ್ದರು.
ಅದಕ್ಕೆ ಪುಷ್ಠಿ ನೀಡುವಂತೆ ಸ್ವತಃ ಆಡಳಿತ ಪಕ್ಷದ ಶಾಸಕಿಗೆ ಜೀವ ಭದ್ರತೆ ನೀಡಲಾರದಷ್ಟು ಸರ್ಕಾರ, ಆಡಳಿತ ವ್ಯವಸ್ಥೆ ನಿಷ್ಕ್ರೀಯವಾಗಿದೆಯೇ ಎಂಬುದು ವಿರೋಧ ಪಕ್ಷಗಳ ಪ್ರಶ್ನೆಯಾಗಿದೆ.
ಯಾಕೆ ಸುಮೊಟೊ ಮಾಡಿಕೊಂಡಿಲ್ಲ
ಕಾರವಾರ ಹಾಲಿ ಶಾಸಕರಾಗಿರುವ ರೂಪಾಲಿ ನಾಯ್ಕ ಅವರು ತಮ್ಮಗೆ ಶಾಸಕರಾದ ದಿನದಿಂದ ಈ ರೀತಿ ಬೆದರಿಸುವ ಕೆಲಸಗಳು ನಡೆಯುತ್ತಿದೆ ಎಂಬುದನ್ನ ಮಾಧ್ಯಮದ ಎದುರು ಹೇಳಿದ್ದಾರೆ. ಈ ಬಗ್ಗೆ ನಾನು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿರುವ ವಿಚಾರವನ್ನ ಕೂಡ ಹೇಳಿದ್ದಾರೆ. ಬೆದರಿಕೆ ಇದೆ ಅಂತಾ ಶಾಸಕರು ಮೊದಲೆ ಹೇಳಿದ್ದರು ಯಾಕೆ ಪೊಲೀಸರು ಈ ಘಟನೆಯನ್ನ ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಿಲ್ಲ. ಓರ್ವ ಜನಪ್ರತಿನಿಧಿಗೆ ಬೆದರಿಕೆ ಇರುವ ಪ್ರಕರಣವನ್ನ ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳದೆ ಇದ್ದರೆ..ಜನ ಸಾಮಾನ್ಯರ ಪಾಡೇನಾಗಬೇಡ ಹೇಳಿ.
ಶಾಸಕಿಗೆ ಭದ್ರತೆ ನೀಡಿ; ಅರಗ ವಜಾ ಮಾಡಿ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಅಪರಾಧ ಚಟುವಟಿಕೆಗಳು ಹೆಚ್ಚುತಿವೆ. ಗೃಹಸಚಿವರು ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷದ ಮುಖಂಡರು ಒತ್ತಾಯಿಸಿದ್ದಾರೆ.. ನಮ್ಮ ಮಾತು ಸತ್ಯ ಎಂಬುದು ಈಗ ಎಲ್ಲರಿಗೂ ಮನವರಿಕೆಯಾಗುತ್ತಿದೆ. ಸ್ವತಃ ತಮ್ಮದೇ ಆಡಳಿತ ಪಕ್ಷದ ಒಬ್ಬ ಮಹಿಳಾ ಶಾಸಕಿಗೆ ಭದ್ರತೆ ನೀಡಲಾರದಷ್ಟು ಸರ್ಕಾರ ಅಸಹಾಯಕವಾದಂತಿದೆ.
ಈಗಾಗಲೇ ಕಾರವಾರದಲ್ಲಿ ಶಾಸಕರಾಗಿದ್ದ ವಸಂತ ಅಸ್ನೋಟಿಕರ್ ಸುಫಾರಿ ಹಂತಕರಿಂದ ಕೊಲೆಯಾಗಿದ್ದನ್ನು ನೋಡಿದ್ದೇವೆ. ಅದೇ ರೀತಿ ಉದ್ಯಮಿ ದಿಲೀಪ ನಾಯ್ಕ ಸಹ ಹಾಡು ಹಗಲೇ ನಡು ರಸ್ತೆಯಲ್ಲೇ ಭೀಕರವಾಗಿ ಕೊಲೆಯಾಗಿದ್ದನ್ನು ನೋಡಿದ್ದೇವೆ. ಅಂಥದ್ದರಲ್ಲಿ ರಾಜ್ಯ ಸರ್ಕಾರ ಕೂಡಲೇ ಶಾಸಕಿಗೆ ಸೂಕ್ತ ಭದ್ರತೆ ನೀಡಬೇಕು.
ಈ ಪ್ರಕರಣದ ಹಿಂದೆ ಇರುವವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೂ ಹಾಲಿ ಶಾಸಕಿಗೆ ಜೀವ ಬೆದರಿಕೆ ಇದ್ದರೂ, ಪ್ರಕರಣ ಗಂಭೀರವಾಗಿ ಪರಿಗಣಿಸದ ನಿಷ್ಕ್ರೀಯ ಗೃಹ ಸಚಿವರನ್ನು ಕೂಡಲೇ ವಜಾ ಮಾಡಬೇಕೆಂದು ವಿರೋಧ ಪಕ್ಷದದ ಮುಖಂಡರು ಒತ್ತಾಯಿಸುತ್ತಿದ್ದಾರೆ.