ಸುದ್ದಿಬಿಂದು ಬ್ಯೂರೋ ವರದಿ

ಕುಮಟಾ : ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ನಾಟಕಕಾರ ಹಾಗೂ ರಂಗಕಲಾವಿದ ಬರ್ಗಿಯ ಪಾಂಡುರಂಗ ಪಟಗಾರ ಅವರು ಅಘನಾಶಿನಿ ನದಿಯಲ್ಲಿ ಕಪ್ಪೆಚಿಪ್ಪು ತೆಗೆಯುವ ವೇಳೆ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಬಡತನದಲ್ಲಿ ಬೆಳೆದಿದ್ದ ಪಾಂಡುರಂಗ ಪಟಗಾರ ಅವರು ನಾಟಕ ರಚನೆ ಹಾಗೂ ಅಭಿನಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ‘ರೌಡಿ ಅರ್ಜುನ’, ‘ಧರ್ಮದ ಊರಲಿ ಕರ್ಮದ ನಾಯಕ’ ಸೇರಿದಂತೆ ನಾಲ್ಕು ನಾಟಕಗಳನ್ನು ರಚಿಸಿದ್ದರು. ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರಿಸುಮಾರು ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದರು. ಕಥಾನಾಯಕ ಹಾಗೂ ಕೌಟುಂಬಿಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಅವರು ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದರು. ಕರ್ನಾಟಕ ರಾಜ್ಯ ನಾಟಕ ಬರಹಗಾರರ ಜಿಲ್ಲಾ ಸಂಘದ ಸದಸ್ಯರಾಗಿದ್ದ ಪಾಂಡುರಂಗ ಪಟಗಾರ ಅವರು ಇತ್ತೀಚೆಗೆ ಧಾರವಾಡ ಜಿಲ್ಲೆಯ ಶಿರಕೋಳದ ಸಿದ್ಧಾರೂಢ ಸಿದ್ಧಾಶ್ರಮದಲ್ಲಿ ನಡೆದ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಕಲಾ ತಪಸ್ವಿ’ ಪ್ರಶಸ್ತಿಯನ್ನೂ ಸ್ವೀಕರಿಸಿದ್ದರು.

ಇವರು ಕುಟುಂಬ ನಿರ್ವಹಣೆಗಾಗಿ ಕಪ್ಪೆ ಚಿಪ್ಪು ತೆಗೆಯುವ ಕಾಯಕವನ್ನೂ ಮಾಡಿಕೊಂಡಿದ್ದರು. ಹಲವು ವರ್ಷಗಳಿಂದ ಇದೇ ವೃತ್ತಿಯ ಮೂಲಕ ಕುಟುಂಬ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದ ಪಾಂಡುರಂಗ ಪಟಗಾರ. ಎಂದಿನಂತೆ ಇಂದು ಬೆಳಿಗ್ಗೆ ಅಘನಾಶಿನಿ ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಒಂದೆಡೆ ರಂಗಭೂಮಿಯಲ್ಲಿ ಕಲಾವಿದನಾಗಿ ಗುರುತಿಸಿಕೊಂಡು ಪ್ರಶಸ್ತಿ ಗೌರವಗಳನ್ನು ಪಡೆದಿದ್ದ ಅವರು, ಮತ್ತೊಂದೆಡೆ ಜೀವನ ನಿರ್ವಹಣೆಗಾಗಿ ಕಷ್ಟದ ದುಡಿಮೆಯಲ್ಲಿ ತೊಡಗಿದ್ದರು. ಅವರ ಅಕಾಲಿಕ ನಿಧನದಿಂದ ರಂಗಭೂಮಿ ಕ್ಷೇತ್ರಕ್ಕೆ ಹಾಗೂ ಕಲಾವಿದರ ಬಳಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.

ಪಾಂಡುರಂಗ ಪಟಗಾರ ಅವರ ನಿಧನಕ್ಕೆ ಕರ್ನಾಟಕ ರಾಜ್ಯ ನಾಟಕ ಬರಹಗಾರರ (ಕವಿಗಳ) ಸಂಘ, ಬೆಂಗಳೂರು ಹಾಗೂ ಉತ್ತರ ಕನ್ನಡ ಜಿಲ್ಲಾ ಘಟಕದ ಪದಾಧಿಕಾರಿಗಳು, ಮಹಾಲಿಂಗೇಶ್ವರ ನಾಟ್ಯಮಂಡಳಿ ಬರ್ಗಿ, ಗೋಳಿಬೀರ ನಾಟ್ಯಮಂಡಳಿ ಗೆಳಯರ ಬಳಗ ಬರ್ಗಿ ಇವರು ಸಂತಾಪ ಸೂಚಿಸಿದ್ದಾರೆ.