ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಕುಮಟಾ ಪೊಲೀಸ್ ಠಾಣೆಯ ಜವಾಬ್ದಾರಿ ವಹಿಸಿಕೊಂಡ ಕೇವಲ 15 ದಿನಗಳಲ್ಲೇ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇನ್ಸ್ಪೆಕ್ಟರ್ ಕೆ. ಕುಸುಮಾಧರ್ ಖಡಕ್ ನಿರ್ಧಾರ ಕೈಗೊಂಡಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಕಾರಣರಾಗಿದ್ದಾರೆ.
ಕುಮಟಾ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ನಡೆಯುತ್ತಿದ್ದ ಓಸಿ,ಮಟ್ಕಾ, ಅಂದರ-ಬಾಹರ್ ಸೇರಿದಂತೆ ಅಕ್ರಮ ಚಟುವಟಿಕೆ ಕಡಿವಾಣ ಹಾಕಲು ಇನ್ಸ್ಪೆಕ್ಟರ್ ಕೆ ಕುಸುಮಾಧರ ಮುಂದಾಗಿರುವುದು ಸಾರ್ವಜನಿಕರಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕುಮಟಾ ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಓಸಿ, ಮಟ್ಕಾ ಮತ್ತು ಅಕ್ರಮ ಮರಳು ಸಾಗಾಟದಂತಹ ಚಟುವಟಿಕೆಗಳ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಲೆ ಇತ್ತು. ಇನ್ಸ್ಪೆಕ್ಟರ್ ಕೆ. ಕುಸುಮಾಧರ್ ಅವರು ಠಾಣೆಯ ಜವಾಬ್ದಾರಿ ವಹಿಸಿಕೊಂಡ ಬಳಿಕ ಕಾರ್ಯಪ್ರವೃತ್ತರಾಗಿದ್ದಾರೆ. ವಿಶೇಷವಾಗಿ ಅಕ್ರಮ ಮರಳು ದಂಧೆಯ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಕಾನೂನು ಉಲ್ಲಂಘಿಸುವವರಿಗೆ ಎಚ್ಚರಿಕೆಯ ಸಂದೇಶ ನೀಡುತ್ತಿದ್ದಾರೆ.
15 ದಿನದಲ್ಲೇ ಖಾಕಿ ಖದರ್ ತೋರಿದ ಇನ್ಸ್ಪೆಕ್ಟರ್!
ಪೊಲೀಸ್ ಠಾಣೆಯ ಜವಾಬ್ದಾರಿ ವಹಿಸಿಕೊಂಡ ಬಳಿಕ ಕೇವಲ ಕುರ್ಚಿಗೆ ಸೀಮಿತವಾಗದೆ, ಸಮಸ್ಯೆಗಳ ಸ್ವರೂಪ ಅರಿತು ಪರಿಹಾರ ಕಂಡುಕೊಳ್ಳಲು ಮುಂದಾಗಿರುವುದು ಇನ್ಸ್ಪೆಕ್ಟರ್ ಕುಸುಮಾಧರ್ ಅವರ ಕಾರ್ಯವೈಖರಿಯಾಗಿದೆ. ಟ್ರಾಫಿಕ್ ಸಮಸ್ಯೆ ಸೇರಿದಂತೆ
ಸಂಚಾರ ಸಮಸ್ಯೆಗಳ ಪರಿಹಾರಕ್ಕೂ ಸ್ವತಃ ಸ್ಥಳಕ್ಕೆ ತೆರಳಿ ಗಮನ ಹರಿಸುತ್ತಿರುವುದು ವಾಹನ ಸವಾರರು ಮತ್ತು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.. ಅಕ್ರಮ ಚಟುವಟಿಕೆಗಳ ವಿರುದ್ಧದ ಕ್ರಮ ಇದೇ ರೀತಿ ನಿರಂತರವಾಗಿ ಮುಂದುವರಿಯಬೇಕು ಎಂಬುದು ಸಾರ್ವಜನಿಕರ ಆಶಯವಾಗಿದೆ.
ಕುಮಟಾದಲ್ಲಿ ಕಾನೂನು ಸುವ್ಯವಸ್ಥೆ ಬಲಪಡಿಸುವುದರ ಜೊತೆಗೆ ಅಕ್ರಮ ಮರಳು ಸಾಗಾಟ, ಓಸಿ ಮತ್ತು ಮಟ್ಕಾ ಚಟುವಟಿಕೆಗಳ ಮೇಲೆ ನಿರಂತರ ನಿಗಾ ವಹಿಸಬೇಕಿದೆ..ಠಾಣೆಗೆ ಹಾಜರಾದ ಕೆಲ ದಿನಗಳಲ್ಲಿಯೇ ತಮ್ಮ ಖಡಕ್ ಕಾರ್ಯಚಟುವಟಿಕೆ ಮೂಲಕ ಗಮನ ಸೆಳೆದಿರುವ ಇನ್ಸ್ಪೆಕ್ಟರ್ ಕೆ. ಕುಸುಮಾಧರ್ ಅವರ ಕಾರ್ಯವೈಖರಿ ಮುಂದಿನ ದಿನಗಳಲ್ಲಿಯೂ ಪರಿಣಾಮಕಾರಿಯಾಗಿ ಮುಂದುವರೆಯುವಂತಾಗಿ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

