ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ತಾಲೂಕಿನ ಬರ್ಗಿಯ ಕಾನಮ್ಮನ ಮೈದಾನದಲ್ಲಿ ಶಾರದೋತ್ಸವ ಸಮಿತಿ ಬರ್ಗಿ ವತಿಯಿಂದ ಆಯೋಜಿಸಲಾದ 20ನೇ ವರ್ಷದ ಶಾರದೋತ್ಸವ ಉತ್ಸವವು ಭಕ್ತಿಭಾವ ಹಾಗೂ ಸಾಂಸ್ಕೃತಿಕ ಸಂಭ್ರಮದೊಂದಿಗೆ ಅದ್ದೂರಿಯಾಗಿ ನಡೆಯುತ್ತಿದೆ.

ಉತ್ಸವದ ಅಂಗವಾಗಿ ಪ್ರತಿದಿನ ಶಾರದಾ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದ್ದು, ಭಕ್ತರಿಗೆ ಪ್ರಸಾದ ವಿತರಣೆ. ಇದರೊಂದಿಗೆ ಪ್ರತಿದಿನವೂ ವೇದಿಕೆ ಕಾರ್ಯಕ್ರಮಗಳನ್ನು ಆಯೋಜಿಸಿ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವದ ಮೆರುಗನ್ನು ಹೆಚ್ಚಿಸಿವೆ.

ಉತ್ಸವದ ಮೊದಲ ದಿನ ಘಟಭೀರ ಭಜನಾ ಮಂಡಳಿಯವರಿಂದ ನಡೆದ ಭಜನಾ ಕಾರ್ಯಕ್ರಮ ಭಕ್ತರನ್ನು ಭಕ್ತಿರಸದಲ್ಲಿ ತೇಲಿಸಿತು. ಎರಡನೇ ದಿನ ಮಂಗಳೂರಿನ ಹೆಜ್ಜೆನಾದ ನೃತ್ಯತಂಡದವರಿಂದ ನಡೆದ ರಸಮಂಜರಿ ಕಾರ್ಯಕ್ರಮ ಸಂಗೀತಾಸಕ್ತರನ್ನು ರಂಜಿಸಿತು. ಕಲಾವಿದರ ಗಾಯನ ಹಾಗೂ ಸಂಗೀತದ ಸೊಬಗು ನೆರೆದಿದ್ದವರನ್ನು ಸಂಗೀತ ಲೋಕದಲ್ಲಿ ತೇಲುವಂತೆ ಮಾಡಿತು. ಇನ್ನು ಜೊನ್ನಾವರದ ಹೊಸಪಟ್ಟಣ ಯಕ್ಷಕಲಾ ಟ್ರಸ್ಟ್ ಹಾಗೂ ದಕ್ಣಿಣೋತ್ತರ ಜಿಲ್ಲೆಯ ನುರಿತ ಹಿರಿಯ ಕಲಾವಿದರಿಂದ ಪ್ರದರ್ಶನಗೊಂಡ ‘ಭೀಷ್ಮ ವಿಜಯ’ ಯಕ್ಷಗಾನ ಪ್ರೇಕ್ಷಕರ ಮನಸೂರೆಗೊಂಡಿತು. ಪೌರಾಣಿಕ ಕಥಾವಸ್ತು, ಕಲಾವಿದರ ಅಭಿನಯ ಹಾಗೂ ಯಕ್ಷಗಾನದ ವೈಭವ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣವನ್ನೇ ನೀಡಿತು.

ಮೂರನೇ ದಿನ ಸ್ಥಳೀಯ ಮಕ್ಕಳಿಂದ ನಡೆದ ವಿವಿಧ ಮನರಂಜನಾ ಕಾರ್ಯಕ್ರಮಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು. ಮಕ್ಕಳ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವ ಮೂಲಕ ಉತ್ಸವ ಸಮಿತಿ ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿತು.

ಶಾರದೋತ್ಸವದ ಕೊನೆಯ ದಿನವಾದ ಇಂದು ಶಾರದಾ ದೇವಿಯ ಅದ್ದೂರಿ ಮೆರವಣಿಗೆ ಹಾಗೂ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ. ಕಾನಮ್ಮನ ಮೈದಾನದಿಂದ ದೇವಿಯ ಮೂರ್ತಿಯನ್ನು ಅದ್ದೂರಿ ಮೆರವಣಿಗೆಯ ಮೂಲಕ ಹೂವಿನ ಕೆರೆಗೆ ಕೊಂಡೊಯ್ದು ವಿಸರ್ಜನೆ ಮಾಡಲಾಗುತ್ತದೆ. ಧಾರ್ಮಿಕ ವಿಧಿವಿಧಾನಗಳೊಂದಿಗೆ 20ನೇ ವರ್ಷದ ಶಾರದೋತ್ಸವಕ್ಕೆ ತೆರೆ ಬೀಳಲಿದೆ.

ಇದನ್ನೂ ಓದಿ/ ಕುಮಟಾದಲ್ಲಿ ಓಸಿ, ಮಟ್ಕಾ, ಅಕ್ರಮ ಮರಳು ದಂಧೆಗೆ ಬ್ರೇಕ್‌! ಇನ್ಸ್‌ಪೆಕ್ಟರ್ ಕೆ. ಕುಸುಮಾಧರ್ ಖಡಕ್ ನಡೆ , ಅಕ್ರಮ ದಂಧೆಕೋರರಿಗೆ ನಡುಕ