ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ :ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಪ್ರಸಿದ್ಧ ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ದೇವರ ತಟ್ಟೆಯ ಹಣದ ವಿಚಾರವಾಗಿ ಅರ್ಚಕರಿಬ್ಬರು ಭಕ್ತರ ಎದುರು ಕಿತ್ತಾಟ ನಡೆಸಿದ ಘಟನೆ ನಡೆದಿದ್ದು, ಕಿತ್ತಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಡಗುಂಜಿ ದೇವಾಲಯದ ಅರ್ಚಕರಾದ ನರಸಿಂಹ್ ಭಟ್ ಹಾಗೂ ರಮಾನಂದ ಭಟ್ ಪರಸ್ಪರ ತಳ್ಳಾಡಿಕೊಂಡಿರುವುದು ವಿಡಿಯೋದಲ್ಲಿ ದಾಖಲಾಗಿದ್ದು, ಕೆಲ ದಿನಗಳ ಹಿಂದೆ ನಡೆದ ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದೇವಾಲಯದಲ್ಲಿ ಭಕ್ತರು ನೀಡುವ ಕಾಣಿಕೆ ಹಾಗೂ ಪೂಜೆ ಸಂಬಂಧಿತ ಹಕ್ಕುಗಳ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಅದು ಕೈ ಕೈ ಮಿಲಾಯಿಸುವ ಮಟ್ಟಕ್ಕೆ ತಲುಪಿದೆ ಎನ್ನಲಾಗಿದೆ. ಈ ಘಟನೆ ದೇವಸ್ಥಾನಕ್ಕೆ ಬಂದಿದ್ದ ಭಕ್ತರಲ್ಲಿ ಅಸಮಾಧಾನ ಹಾಗೂ ಆಘಾತಕ್ಕೆ ಕಾರಣವಾಗಿದೆ.
ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ಪೂಜೆ ನಡೆಸುವ ಹಕ್ಕು ಹಾಗೂ ದೇವಾಲಯದ ಆಡಳಿತಕ್ಕೆ ಸಂಬಂಧಿಸಿದಂತೆ ಅರ್ಚಕರ ಕುಟುಂಬಗಳ ನಡುವೆ ಕಳೆದ ಹಲವು ವರ್ಷಗಳಿಂದ ವಿವಾದ ಮುಂದುವರಿದಿದ್ದು, ಈ ಕುರಿತಾಗಿ ನ್ಯಾಯಾಲಯದಲ್ಲಿಯೂ ದಾವೆ ದಾಖಲಾಗಿರುವುದು ತಿಳಿದುಬಂದಿದೆ. ಇದೇ ಹಿನ್ನಲೆಯಲ್ಲಿ ದೇವರ ತಟ್ಟೆಯ ಹಣ ಹಾಗೂ ಕಾಣಿಕೆ ಹಂಚಿಕೆ ಕುರಿತು ಸಂಘರ್ಷ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ/‘ಹಫ್ತಾ’–ಲಂಚದ ಕಬಂಧಬಾಹು ಹಿಡಿತದಲ್ಲಿ ಅಬಕಾರಿ ಇಲಾಖೆ : ರಾಜ್ಯ ಸರ್ಕಾರದ ಮೌನಕ್ಕೆ ರೂಪಾಲಿ ನಾಯ್ಕ ಆಕ್ರೋಶ


