ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ : ದೀಪಾವಳಿ ಹಬ್ಬವನ್ನ ನಾಡಿನಾದ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ…ಗ್ರಾಮೀಣ ಭಾಗದಲ್ಲಂತು ಹಬ್ಬಕ್ಕೆ ವಿಶೇಷವಾದ ಮಾನ್ಯತೆ ಇದೆ…ಹಾಗೆ ಅಂಕೋಲಾ ತಾಲೂಕಿನಲ್ಲಿ ದೀಪಾವಳಿಯಲ್ಲಿ ಸಾಂಪ್ರದಾಯಿಕ ರೋಚಕ ಆಟ ಮನೆಮಾತಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ದೀಪಾವಳಿ ಬಂತೆಂದ್ರೆ ಸಾಕು ಇಲ್ಲಿ ಆಡುವ ಸಾಂಪ್ರದಾಯಿಕ ಹೊಂಡೆಯಾಟ ನೆನಪಾಗುತ್ತದೆ. ಅಂಕೋಲಾ ತಾಲೂಕಿನ ಕ್ಷತ್ರೀಯ ಕೋಮಾರಪಂಥ ಸಮಾಜದವರು ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಆಡುವ ಹೊಂಡೆಯಾಟ ನೊಡುವುದೆ ಚಂದ. ಅಂಕೋಲಾ ತಾಲೂಕಿನ ಹೊನ್ನೆಕೇರಿ ಮತ್ತು ಕುಂಬಾರಕೇರಿ ಮತ್ತು ಲಕ್ಷ್ಮೀಶ್ವರ ಎಂಬ ಊರಿನ ಜನರು ಎರಡು ತಂಡವನ್ನ ಮಾಡಿಕೊಂಡು ಹಿಂಡಲಗಾಯಿಯಿಂದ ಒಬ್ಬರಿಗೊಬ್ಬರು ಹೊಡೆದಾಡಿ ಕೊಳ್ಳುತ್ತಾರೆ, ಕವಣೆಯಲ್ಲಿ ಹಿಂಡಲಕಾಯಿಯನ್ನ ಸಿಕ್ಕಿಸಿಕೊಂಡು ಮೈ ಜಲ್ಲೆನುವಂತೆ ಇನ್ನೊಂದು ತಂಡದ ಮೇಲೆ ದಾಳಿ ಮಾಡುತ್ತಾರೆ,ರೋಚಕತೆಯಿಂದ ಕೂಡಿದ ಈ ಆಟದಲ್ಲಿ ಮೊಣಕಾಲಿನ ಕೆಳಗಡೆ ಮಾತ್ರ ದಾಳಿಮಾಡುವುದು ಪದ್ದತಿ..

ಕೋಮಾರಪಂಥ ಸಮಾಜದವರು ಅಂಕೋಲಾ ತಾಲೂಕಿನಲ್ಲಿ ನೂರಾರು ವರ್ಷದಿಂದ ಹಮ್ಮಿಕೊಂಡು ಬರುತ್ತಿರುವ ದೀಪಾವಳಿಯ ಸಾಂಪ್ರದಾಯಿಕ ಆಟವಾಗಿದೆ. ದೀಪಾವಳಿ ಬಲಿಪಾಡ್ಯ ದಿನ ನಡೆಯುವ ಈ‌ ಹೊಂಡೆಯಾಟವನ್ನ ನೋಡಲು ಸಾವಿರಾರು ಜನ‌ ನೆರೆದಿರುತ್ತಾರೆ, ರೋಚಕತೆಯಿಂದ ಕೂಡಿದ ಈ ಆಟಕ್ಕೆ ತನ್ನದೆ ಆದ ಇತಿಹಾಸ ಇದೆ, ಕ್ಷತ್ರೀಯ ಕೋಮಾರಪಂಥ ಸಮಾಜದವರು ಪೌರಾಣಿಕ ಕಾಲದಲ್ಲಿ ನಡೆಯುತ್ತಿದ್ದ ಯುದ್ದದ ಸಂದರ್ಭದಲ್ಲಿ ಎದುರಾಳಿ ತಂಡದ ಮೇಲೆ ದಾಳಿ ಮಾಡುತ್ತಿದ್ದರಂತೆ, ಸೈನಿಕರಾಗಿ ಹೋರಾಟ ಮಾಡುತ್ತಿದ್ದರಂತೆ ಈ ಸಂದರ್ಭದಲ್ಲಿ ವೀರತ್ವ ಸಾರಿದ  ಕ್ಷತ್ರೀಯ ಕೋಮಾರಪಂಥ ಸಮಾಜದವರು ಈಗ ತಮ್ಮದೇ ಸಮಾಜದ ಎರಡು ಊರಿನ ಜನರನ್ನು ಒಳಗೊಂಡು ಎರಡು ತಂಡ ಮಾಡಿ ಹೊಂಡೆಯಾಟ ಆಡಿ ಸಂಪ್ರದಾಯ ಉಳಿಸಿಕೊಂಡು ಬಂದಿದ್ದಾರೆ, ಕವಣೆಯಿಂದ ಸೀಳಿ ಬಂದ ಹಿಂಡಲಕಾಯಿ ಎದುರಾಳಿ ತಂಡಗಳಲ್ಲಿ ಭಯಹುಟ್ಟಿಸುವ ದೃಶ್ಯ ರೋಚಕವಾಗಿರುತ್ತದೆ.

ದೀಪಾವಳಿ ಹಬ್ಬದ ದಿನ ಗ್ರಾಮೀಣ ಭಾಗದಲ್ಲಿ ಅದರದ್ದೆ ಆದ ವಿಶೇಷತೆ ಹಿಂದಿನ ಸಾಂಪ್ರದಾಯಿಕ ಪದ್ಧತಿ ಇನ್ನು ಜೀವಂತವಾಗಿದೆ ಎನ್ನೋದಕ್ಕೆ ಇವತ್ತು ಇಲ್ಲಿ ನಡೆಯುತ್ತಿರುವ ಹೊಂಡೆಯಾಟ ಸಾಕ್ಷಿಯಾಗಿದೆ.

ಇದನ್ನೂ ಓದಿ/ ಸಿದ್ದರಾಮಯ್ಯ ಬಳಿಕ ಕಾಂಗ್ರೆಸ್ ನಾಯಕತ್ವ ಸತೀಶ್ ಜಾರಕಿಹೊಳಿ ಕಡೆಗೆ ? ಯತೀಂದ್ರ ಹೇಳಿಕೆ ಕಾಂಗ್ರೇಸ್‌ನಲ್ಲಿ ಸಂಚಲನ