ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಉತ್ತರ ಕನ್ನಡ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಕೆಡಿಸಿಸಿ) ಆಡಳಿತ ಮಂಡಳಿ ಚುನಾವಣೆಯ ನಾಮಪತ್ರಗಳ ಪರಿಶೀಲನೆ ಪ್ರಕ್ರಿಯೆ ನಿನ್ನೆ ಮುಕ್ತಾಯವಾಗಿದ್ದು,‌ ಮಂಕಾಳು ವೈದ್ಯ ಅವರ ವಿರುದ್ದ ಸ್ಪರ್ಧೆಗೆ ಇಳಿಯಲು ನಾಮಪತ್ರ ಸಲ್ಲಿಕೆ ಮಾಡಿದ್ದ, ಮಹಾದೇವ ಗೋವಿಂದ ನಾಯ್ಕ ಅವರ ನಾಮಪತ್ರ ತಿರಸ್ಕಾರವಾಗಿದ್ದು, ಈ ಮೂಲಕ ಮಂಕಾಳ್ ವೈದ್ಯ ಅವರು ಅವಿರೋಧ ಆಯ್ಕೆಯಾಗಿದಂತಾಗಿದೆ.

ಒಟ್ಟು 46 ಅಭ್ಯರ್ಥಿಗಳು ಸಲ್ಲಿಸಿದ್ದ 87 ನಾಮಪತ್ರಗಳಲ್ಲಿ 44 ನಾಮಪತ್ರಗಳು ಪುರಷ್ಕೃತವಾಗಿದ್ದು, 2 ನಾಮಪತ್ರಗಳನ್ನು ಚುನಾವಣಾಧಿಕಾರಿ ಹಾಗೂ ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ ತಿರಸ್ಕರಿಸಿದ್ದಾರೆ. ನಾಮಪತ್ರ ಹಿಂಪಡೆಯಲು ಇಂದು (ಅಕ್ಟೋಬರ್ 19) ಕೊನೆಯ ದಿನವಾಗಿದೆ.

ಭಟ್ಕಳ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಸ್ಪರ್ಧೆಗಿಳಿದಿದ್ದ ಮಾದೇವ ಗೋವಿಂದ ನಾಯ್ಕ ಅವರು ನಾಮಪತ್ರ ಸಲ್ಲಿಕೆ ವೇಳೆ ಅವರು  ಸ್ಪರ್ಧೆಗೆ ಇಳಿದ ಕ್ಷೇತ್ರ ಹೊರತು ಪಡಿಸಿ ಬೇರೆ‌ ಮತ ಕ್ಷೇತ್ರದವರನ್ನ ಸೂಚಕರನ್ನಾಗಿ ಮಾಡಿರುವ ಕಾರಣ ಅವರ ನಾಮಪತ್ರ ತಿರಸ್ಕಾರ ವಾಗಿದೆ.. ಇದರಿಂದಾಗಿ ಅದೇ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ  ಸಚಿವ ಮಂಕಾಳ ವೈದ್ಯ ಅವರು ಅವಿರೋಧ ಆಯ್ಕೆಗೊಂಡಿದ್ದಾರೆ.

ಇನ್ನೂ ಸಿದ್ದಾಪುರ ಕ್ಷೇತ್ರದ ವಿವೇಕ ಹೆಗಡೆ ಗಡಿಹಿತ್ಲು ಅವರ ನಾಮಪತ್ರವು ಕರ್ನಾಟಕ ಹೈಕೋರ್ಟ್‌ನ ರಿಟ್ ಪಿಟೀಷನ್ ಆದೇಶದ ಹಿನ್ನೆಲೆ ತಿರಸ್ಕೃತಗೊಂಡಿದೆ. ಉಳಿದಂತೆ ಕಾರವಾರದಿಂದ ಸ್ಪರ್ಧೆಗೆ ಇಳಿದಿರುವ ನಂದಕಿಶೋರ ನಾಯ್ಕ ಮತ್ತು ಸುರೇಶ್ ರಾಮ ಪೆಡೇಕರ, ಶಿರಸಿಯಿಂದ ಜಿ.ಆರ್. ಹೆಗಡೆ ಬೆಳ್ಳೇಕೇರಿ ಹಾಗೂ ಗಣಪತಿ ಜೋಶಿ ಕೊಪ್ಪಲತೋಟ, ಸಿದ್ದಾಪುರದಿಂದ ಬಾಲಚಂದ್ರ ಹೆಗಡೆ ಹಳದೋಟ ಮತ್ತು ರಾಘವೇಂದ್ರ ಶಾಸ್ತ್ರಿ, ಯಲ್ಲಾಪುರದಿಂದ ರಾಮಕೃಷ್ಣ ಹೆಗಡೆ ಗೋರ್ಸಗದ್ದೆ, ಮುಂಡಗೋಡದಿಂದ ಎಲ್.ಟಿ. ಪಾಟೀಲ್, ಹಳಿಯಾಳದಿಂದ ಎಸ್.ಎಲ್. ಘೋಟೆಕರ, ಅಂಕೋಲಾದಿಂದ ಬೀರಣ್ಣ ನಾಯ್ಕ, ಕುಮಟಾದಿಂದ ಗಜಾನನ ಪೈ ಮತ್ತು ರಾಜಗೋಪಾಲ ಅಡಿ, ಹೊನ್ನಾವರದ ಶಿವಾನಂದ ಹೆಗಡೆ ಕಡತೋಕ, ಜೊಯ್ದಾದ ಕೃಷ್ಣ ದೇಸಾಯಿ ಹಾಗೂ ಇತರೆ ಕ್ಷೇತ್ರಗಳಿಂದ ಗೋಪಾಲಕೃಷ್ಣ ವೈದ್ಯ, ಆರ್.ಎಂ. ಹೆಗಡೆ ಬಾಳೇಸರ, ತಿಮ್ಮಯ್ಯ ಹೆಗಡೆ ಉಲ್ಲಾಳ, ಮೋಹನದಾಸ ನಾಯ್ಕ ಮುಂತಾದವರ ನಾಮಪತ್ರಗಳು ಪುರಸ್ಕೃತಗೊಂಡಿದೆ.

ಇದನ್ನೂ ಓದಿ/temple theft/ದೇವಸ್ಥಾನದ ಕಳ್ಳತನ ಪ್ರಕರಣ ಭೇದಿಸಿದ ಶಿರಸಿ ಗ್ರಾಮೀಣ ಪೊಲೀಸರು : ಇಬ್ಬರು ಆರೋಪಿತರ ಬಂಧನ