ಕುಮಟಾ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಹತ್ತಾರು ಸಮಸ್ಯೆಗಳು ಕಣ್ಮುಂದೆ ಕಾಣಿಸುತ್ತಿವೆ. ಆದರೆ, ವಿರೋಧ ಪಕ್ಷದ ಜನಪ್ರತಿನಿಧಿಗಳಾಗಲಿ, ಹೋರಾಟಗಾರರಾಗಲಿ ಯಾರೂ ಕೂಡ ಕ್ಷೇತ್ರದಲ್ಲಿನ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತದೆ ಮೌನವಾಗಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗುತ್ತಿದೆ.
ಪ್ರಮುಖವಾಗಿ, ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿನ ಬಹುತೇಕ ರಸ್ತೆಗಳು ಹದಗೆಟ್ಟಿವೆ. ಪಟ್ಟಣದ ಬಸ್ ನಿಲ್ದಾಣದ ಎದುರಿನ ರಸ್ತೆ ಹೊಳೆಯಂತೆ ಆಗಿದ್ದರೆ. ಕೋರ್ಟ್ ರಸ್ತೆ, ಹಳೆ ಬಸ್ ನಿಲ್ದಾಣದ ಮುಂದೆ ಇರುವ ರಸ್ತೆ ಕೂಡ ಚಿಂದಿಯಾಗಿರುವ ಸ್ಥಿತಿಯಲ್ಲಿದೆ. ಕುಮಟಾದಿಂದ ಚಂದಾವರದತ್ತ ಹೋಗುವ ಮಾರ್ಗವಂತೂ ಚರಂಡಿಯಂತಾಗಿದೆ. ಹಿಂದಿನ ಸರಕಾರದಲ್ಲಿ ಮಂಜೂರಾದ ಅನೇಕ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಕೆಲವು ಕಾಮಗಾರಿಗಳಿಗೆ ಚಾಲನೆ ಕೂಡ ಸಿಕ್ಕಿಲ್ಲ.
ಕುಮಟಾ ಕ್ಷೇತ್ರದ ಸ್ಥಿತಿಗತಿಗಳನ್ನು ನೋಡಿ “ಇಲ್ಲಿ ಯಾರು ಕೇಳುವವರು ಇಲ್ಲ, ಹೇಳುವವರೂ ಇಲ್ಲದಂತಾಗಿದೆ. ಹಿಂದೆ ಇಂತಹ ಸಂದರ್ಭಗಳಲ್ಲಿ ವಿರೋಧ ಪಕ್ಷದ ನಾಯಕರು, ರಾಜಕೀಯ ಮುಖಂಡರು ಹಾಗೂ ಹೋರಾಟಗಾರರು ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಎಲ್ಲರೂ ಮೌನವಾಗಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ. ಹೋರಾಟ ಸಮಿತಿಗಳು ಹಾಗೂ ಕನ್ನಡ ಸಂಘಟನೆಗಳೂ ಈಗ ಶಸ್ತ್ರಾಸ್ತ್ರ ತ್ಯಾಗಮಾಡಿದಂತಿವೆ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡುವಂತಾಗಿದೆ. ಆಡಳಿತ ಪಕ್ಷದಲ್ಲಿರುವ ನಾಯಕರು ಎನಿಸಕೊಂಡವರು ತಮ್ಮ ಸರಕಾರದಿಂದ ಕುಮಟಾಕ್ಕೆ ಎಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮಂಜೂರಿ ಮಾಡಿಸಿಕೊಂಡಿದ್ದಾರೆ ಎಂಬುದನ್ನಾದರೂ ಜನತೆಗೆ ತಿಳಿಸಬೇಕಿತ್ತು. ಆದರೆ ಇದೀಗ ಅದು ಕೂಡ ಕಾಣುತ್ತಿಲ್ಲ.
ಆಡಳಿತ ಪಕ್ಷದ ಮುಖಂಡರ ಬಗ್ಗೆ ಪ್ರತಿಪಕ್ಷ ನಾಯಕರು ಹೇಳುವದೇನೆಂದರೆ – “ಅವರು ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ಬ್ಯೂಸಿಯಾಗಿರಬಹುದು”ಎಂದು ಟೀಕೆ ಮಾಡುತ್ತಿದ್ದಾರೆ.ಯಾವುದೇ ಪಕ್ಷದ ನಾಯಕರು ಸಮಸ್ಯೆಗಳ ಪರಿಹಾರದ ಬಗ್ಗೆ ಮುಂದಾಗದೆ ಮೌನವಾಗಿರುವುದು ನಿಜಕ್ಕೂ ದುರಂತವೇ ಸರಿ. ಇನ್ನಾದರೂ ಚುನಾವಣೆ ಹೊತ್ತಲ್ಲಿ ಮಾತ್ರ ಅಭಿವೃದ್ಧಿ ಬಗ್ಗೆ ಮಾತನಾಡುವುದನ್ನ ಬಿಟ್ಟು, ಜನರ ಸಮಸ್ಯೆಗೆ ಸ್ಪಂದಿಸಬೇಕಾದ ಅನಿರ್ವಾಯತೆ ಇದೆ. ಕೊನೆ ತನಕ ಇದೆ ರೀತಿ ಮೌನವಾಗಿದ್ದರೆ ಜನರೆ ತಕ್ಕಪಾಠ ಕಲಿಸುವುದರಲ್ಲಿ ಅನುಮಾನ ಇಲ್ಲ.