ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: 2023ರ ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ತಮ್ಮ ಗೆಲುವು ಸಿಂಧುವಾಗಿದೆ ಎಂದು  ಹೈಕೋರ್ಟ್  ತೀರ್ಪು ನೀಡಿದ ಹಿನ್ನೆಲೆಯಲ್ಲಿ, ಬಿಜೆಪಿ ಕಾರ್ಯಕರ್ತರು ಪಟ್ಟಣದ ಗಿಬ್ ಸರ್ಕಲ್‌ನಲ್ಲಿ ವಿಜಯೋತ್ಸವ ಆಚರಿಸಿದರು.

ಶಾಸಕ ದಿನಕರ ಶೆಟ್ಟಿಯವರ ಗೆಲುವನ್ನು ಪ್ರಶ್ನಿಸಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಸೂರಜ್ ನಾಯ್ಕ ಸೋನಿ ಅವರು ಸಲ್ಲಿಸಿದ್ದ ಚುನಾವಣಾ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ಬಳಿಕ , ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.ಸ್ಥಳಕ್ಕೆ ಆಗಮಿಸಿದ ಶಾಸಕರಿಗೆ ಕಾರ್ಯಕರ್ತರು,, ಪುಷ್ಪಗುಚ್ಚ ನೀಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ ಅವರು, “2023ರ ವಿಧಾನಸಭಾ ಚುನಾವಣೆಯಲ್ಲಿ ನಾನು 671 ಮತಗಳ ಅಂತರದಿಂದ ಗೆದ್ದಿದ್ದೇನೆ. ಆದರೆ, ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಅವರು ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಸಮಗ್ರ ವಿಚಾರಣೆ ಬಳಿಕ ನ್ಯಾಯಾಲಯ ಸ್ಪಷ್ಟವಾದ ತೀರ್ಪು ನೀಡಿದೆ. ಈ ತೀರ್ಪಿನಿಂದ ಜನರಲ್ಲಿದ್ದ ಹಾಗೂ ಕಾರ್ಯಕರ್ತರಲ್ಲಿದ್ದ ಗೊಂದಲ ದೂರವಾಗಿದೆ. ಪಕ್ಷದ ಪರ ಶ್ರಮಿಸಿದ ಎಲ್ಲ ಕಾರ್ಯಕರ್ತರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತೇನೆ,” ಎಂದರು.

ಈ ಕಾರ್ಯಕ್ರಮದಲ್ಲಿ ರಾಜ್ಯ ಶಿಕ್ಷಣ ಪ್ರಕೋಷ್ಠದ ಸಹಸಂಚಾಲಕ ಎಂ.ಜಿ. ಭಟ್, ಜಿಲ್ಲಾ ಉಪಾಧ್ಯಕ್ಷ ಜಿ.ಎಸ್. ಗುನಗಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ, ಮಂಡಲಾಧ್ಯಕ್ಷ ಜಿ.ಐ. ಹೆಗಡೆ ,
ಹೊನ್ನಾವರ ಮಂಡಲಾಧ್ಯಕ್ಷ ಮಂಜುನಾಥ ನಾಯ್ಕ
ಶಿವಾನಂದ ಹೆಗಡೆ ಕಡತೋಕಾ, ಕುಮಾರ್ ಮಾರ್ಕಾಂಡೇಯ ಗೋಕರ್ಣ, ಗಜು ಪೈ, ಚೇತೇಶ ಶಾನಭಾಗ, ಮಹೇಶ್ ಶೆಟ್ಟಿ ಗೋಕರ್ಣ, ಹೇಮಂತ್ ಕುಮಾರ್ ಗಾಂವಕರ್, ಸೂರ್ಯಕಾಂತ ಗೌಡ, ಯುವಮೋರ್ಚಾ ಅಧ್ಯಕ್ಷ ಪವನ್ ಶೆಟ್ಟಿ, ಗೀತಾ ಹರಿಕಾಂತ್ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಹಾಗೂ ಶಾಸಕರ ಅಭಿಮಾನಿಗಳು ಪಾಲ್ಗೊಂಡಿದ್ದರು.