ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: ನಾಡಹಬ್ಬ ದಸರಾ(Dasara) ಉದ್ಘಾಟಕರಾಗಿ ಲೇಖಕಿ ಬಾನು ಮುಷ್ತಾಕ್ (Banu Mushtaq) ಅವರನ್ನು ಸರ್ಕಾರ ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿ ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha), ಸಲ್ಲಿಸಿದ ಅರ್ಜಿಯನ್ನ (ಪಿಐಎಲ್) ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಈ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು. ವಿಚಾರಣೆ ವೇಳೆ ಪೀಠವು, ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದರಿಂದ ಯಾವುದೇ ಸಂವಿಧಾನಿಕ ಹಕ್ಕು ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟಪಡಿಸಿ, ಅರ್ಜಿಗಳನ್ನು ವಜಾಗೊಳಿಸಿದೆ.. “ವಿಜಯದಶಮಿ ಅಂದರೆ ಕೆಟ್ಟದಿನ ಮೇಲೆ ಒಳ್ಳೆಯದಿನ ವಿಜಯ. ಇದು ದೇಶಾದ್ಯಂತ ಆಚರಿಸಲಾಗುವ ಹಬ್ಬ” ಎಂದು ಪೀಠ ಈ ಸಂದರ್ಭದಲ್ಲಿ ಹೇಳಿದೆ.
ಅರ್ಜಿದಾರರ ಪರ ವಾದ
ಅರ್ಜಿದಾರರ ಪರ ವಕೀಲ ಸುದರ್ಶನ ಅವರು, “ಬಾನು ಮುಷ್ತಾಕ್ ಅವರು ಹಿಂದೂ ಧರ್ಮ ಮತ್ತು ಕನ್ನಡದ ವಿರುದ್ಧವಾಗಿ ಮಾತನಾಡಿದ್ದಾರೆ. ಭುವನೇಶ್ವರಿ ಕಾರ್ಯಕ್ರಮದಲ್ಲಿ ಕುಂಕುಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇಂತಹವರು ದಸರಾ ಉದ್ಘಾಟನೆಗೆ ಯೋಗ್ಯರಲ್ಲ” ಎಂದು ವಾದ ಮಂಡಿಸಿದರು.
ದಸರಾ ಹಬ್ಬವು ಹಿಂದೂ ಧರ್ಮಕ್ಕೆ ಸಂಬಂಧಿಸಿದ ಆಚರಣೆ. ಉದ್ಘಾಟನೆ ವೇಳೆ ಹೂವಿನ ಅಭಿಷೇಕ ಹಾಗೂ ಹಲವು ಧಾರ್ಮಿಕ ವಿಧಿಗಳು ನಡೆಯುತ್ತವೆ. ಬಾನು ಮುಷ್ತಾಕ್ ಅವರ ನಂಬಿಕೆಗಳು ಈ ಧಾರ್ಮಿಕ ಆಚರಣೆಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ವಕೀಲರು ವಾದಿಸಿದರು.
ಇದಕ್ಕೆ ಪ್ರತಿಯಾಗಿ ಪೀಠವು, “ನಂಬಿಕೆ ಇಲ್ಲದವರು ಪೂಜೆ ಸಲ್ಲಿಸಬಾರದು ಎಂದು ದೇವಸ್ಥಾನ ಅಥವಾ ಟ್ರಸ್ಟಿ ಹೇಳಿಲ್ಲ. ನಿಮ್ಮ ಅಭಿಪ್ರಾಯವನ್ನು ಸೂಕ್ತ ವೇದಿಕೆಯಲ್ಲಿ ವ್ಯಕ್ತಪಡಿಸಬಹುದು. ಆದರೆ ಸಂವಿಧಾನದ ಯಾವ ಹಕ್ಕು ಉಲ್ಲಂಘನೆಯಾಗಿದೆ ಎಂದು ನಮಗೆ ತೋರಿಸಬೇಕು” ಎಂದು ಪ್ರಶ್ನಿಸಿತು.
ಸರ್ಕಾರದ ಪರ ವಾದ
ಸರ್ಕಾರದ ಪರವಾಗಿ ವಾದ ಮಂಡಿಸಿದ ಅಟಾರ್ನಿ ಜನರಲ್ ಶಶಿಕಿರಣ್ ಶೆಟ್ಟಿ ಅವರು, “ಬಾನು ಮುಷ್ತಾಕ್ ಅವರನ್ನು ಹಿಂದೂ ವಿರೋಧಿ ಎಂದು ಕರೆದಿರುವುದು ತಪ್ಪು. ಅವರು ಸ್ವತಃ ಚಾಮುಂಡಿ ಬೆಟ್ಟಕ್ಕೆ ಹೋಗಲು ಆಸಕ್ತಿ ತೋರಿಸಿದ್ದಾರೆ. ಹಿಂದೂ ಅಲ್ಲದವರನ್ನು ಧಾರ್ಮಿಕ ಕಾರಣಕ್ಕೆ ತಳ್ಳಿಹಾಕುವುದು ಸರಿಯಲ್ಲ. ಹಿಂದೆ ದಸರಾ ಉದ್ಘಾಟಿಸಿದ್ದ ನಿಸಾರ್ ಅಹಮದ್ ಜೊತೆ ಪ್ರತಾಪ್ ಸಿಂಹ ಅವರು ವೇದಿಕೆಯಲ್ಲಿ ಇದ್ದರು, ಅಂದಾಗ ವಿರೋಧಿಸಲಿಲ್ಲ. ಈಗ ಮುಸ್ಲಿಂ ಮಹಿಳೆ ಎಂದು ಮಾತ್ರ ವಿರೋಧಿಸುತ್ತಿದ್ದಾರೆ” ಎಂದು ವಾದಿಸಿದರು.ಅಷ್ಟೇ ಅಲ್ಲದೆ, ಅರ್ಜಿದಾರರ ವಿರುದ್ಧ ದಂಡ ವಿಧಿಸಬೇಕೆಂದು ಸರ್ಕಾರದ ಪರ ವಕೀಲರು ಬೇಡಿಕೆ ಇಟ್ಟರು.
ಅಂತಿಮ ತೀರ್ಪು
ಎರಡು ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ, ಹೈಕೋರ್ಟ್ ಪೀಠವು, ಬಾನು ಮುಷ್ತಾಕ್ ಅವರ ಆಯ್ಕೆ ಸಂವಿಧಾನಾತ್ಮಕ ಹಕ್ಕು ಉಲ್ಲಂಘನೆಯಲ್ಲ ಎಂದು ತೀರ್ಮಾನಿಸಿ, ಅರ್ಜಿಗಳನ್ನು ವಜಾಗೊಳಿಸಿತು.
ಇದನ್ನೂ ಓದಿ ಕಾರವಾರ ನಗರದ ಹೃದಯಭಾಗದಲ್ಲೇ ಕೆಟ್ಟು ನಿಂತ ಬಸ್ : ಪ್ರಯಾಣಿಕರಿಗೆ ನಿತ್ಯವೂ ನರಕಯಾತನೆ