ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ತಾಲೂಕಿನ ವ್ಯಾಪ್ತಿಯಲ್ಲಿ ರಸ್ತೆ ಅಪಘಾತಗಳ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ನಿಯಮ ಪಾಲನೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಕುಮಟಾ ತಾಲ್ಲೂಕು ಕಚೇರಿಯಲ್ಲಿ ಮಹತ್ವದ ಸಭೆ ನಡೆಸಲಾಯಿತು
ಸಭೆಯಲ್ಲಿ ತಹಶೀಲ್ದಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (ಹೊನ್ನಾವರ), ಪೊಲೀಸ್ ನಿರೀಕ್ಷಕರು (ಕುಮಟಾ–ಗೋಕರ್ಣ), NWKRTC ಡಿಪೋ ಮ್ಯಾನೇಜರ್, ಪುರಸಭೆ ಮುಖ್ಯಾಧಿಕಾರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಸಹಾಯಕ ಆಯುಕ್ತರು ಮಾತನಾಡಿ, “ಹೆಲ್ಮೆಟ್ ಮತ್ತು ಸೀಟ್‌ಬೆಲ್ಟ್ ಬಳಸದೆ ವಾಹನ ಸವಾರರು ನಿರ್ಲಕ್ಷ್ಯ ತೋರಿಸುವುದು, ಹೆದ್ದಾರಿಯಲ್ಲಿ ಭಾರೀ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದು, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ಜೀವ ಉಳಿಸಲು ನಿಯಮ ಪಾಲನೆ ಅತ್ಯಗತ್ಯ” ಎಂದು ಹೇಳಿದರು.
ಸಭೆಯ ಪ್ರಮುಖ ನಿರ್ಧಾರಗಳು
ಹೆಲ್ಮೆಟ್ ಕಡ್ಡಾಯ: ದ್ವಿಚಕ್ರ ಸವಾರರು ಮತ್ತು ಹಿಂಬದಿ ಸವಾರರು (4 ವರ್ಷ ಮೇಲ್ಪಟ್ಟವರು) ಹೆಲ್ಮೆಟ್ ಧರಿಸಲೇಬೇಕು. ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು..
ಅಪ್ರಾಪ್ತರಿಗೆ ವಾಹನ ಚಾಲನೆ ನಿಷೇಧ: 18 ವರ್ಷಕ್ಕಿಂತ ಕೆಳಗಿನ ವಯಸ್ಸಿನವರು ಬೈಕ್ ಚಲಾಯಿಸಿದರೆ, ವಾಹನ ಮಾಲಕರ ವಿರುದ್ಧ ಕಾನೂನು ಕ್ರಮ. ಮದ್ಯಪಾನ ವಾಹನ ಚಲನೆಗೆ ಅಡ್ಡಿ: Drunk & Drive ವಿರುದ್ಧ ನಿರಂತರ ತಪಾಸಣೆ ಬೇಕಿದೆ.
ಸರ್ಕಾರಿ ನೌಕರರು ಮಾದರಿಯಾಗಲಿ: ಎಲ್ಲಾ ಇಲಾಖಾ ನೌಕರರು ನಿಯಮ ಪಾಲನೆಗೆ ಆದ್ಯತೆ ನೀಡಬೇಕು. ಬಾಡಿಗೆ ಬೈಕ್‌ಗಳಿಗೆ ನಿಯಂತ್ರಣ: ಪ್ರವಾಸಿಗರು ಬಳಸುವ ಬಾಡಿಗೆ ಬೈಕ್‌ಗಳಲ್ಲಿ ಹೆಲ್ಮೆಟ್ ಧರಿಸದೇ ಇದ್ದರೆ ಮಾಲಕರ ಮೇಲೂ ಕ್ರಮ.
ಹೆದ್ದಾರಿಯಲ್ಲಿ ನಿಯಮ ಉಲ್ಲಂಘನೆಗೆ ತಡೆ: ಎಲ್ಲೆಂದರಲ್ಲಿ ಭಾರೀ ವಾಹನ ನಿಲ್ಲಿಸುವುದನ್ನು ತಡೆಗಟ್ಟಲು ಪೆಟ್ರೋಲಿಂಗ್ ಬಲಪಡಿಸಲಾಗುವುದು.
ಇಂಧನ ವಿತರಣೆ ನಿಯಮ: ಹೆಲ್ಮೆಟ್ ಧರಿಸದ ದ್ವಿಚಕ್ರ ಸವಾರರಿಗೆ ಪೆಟ್ರೋಲ್ ಬಂಕ್‌ನಲ್ಲಿ ಇಂಧನ ನೀಡದಂತೆ ಕ್ರಮ. ಅನಧಿಕೃತ ಅಂಗಡಿಗಳ ತೆರವು: ಹೆದ್ದಾರಿ ಪಕ್ಕದಲ್ಲಿನ ಅನಧಿಕೃತ ಅಂಗಡಿಗಳ ತೆರವು ಕಾರ್ಯಾಚರಣೆ.
ಬಸ್‌ಗಳಲ್ಲಿ ಮಿತಿ ಮೀರಿ ಪ್ರಯಾಣಿಕರನ್ನ ತುಂಬುವಂತಿಲ್ಲ: ಬಾಗಿಲಲ್ಲಿ ನೇತಾಡಿಕೊಂಡು ಪ್ರಯಾಣ ಮಾಡುವುದನ್ನು ತಡೆಯಲು NWKRTCಗೆ ವಿಶೇಷ ಸೂಚನೆ ನೀಡಬೇಕು
ಪ್ರವಾಸಿ ತಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ: ಗೋಕರ್ಣದ ಹೋಮ್‌ಸ್ಟೇ–ರೆಸಾರ್ಟ್‌ಗಳಲ್ಲಿ ಪಾರ್ಕಿಂಗ್ ಇಲ್ಲದಿರುವುದರಿಂದ ಕಟ್ಟಡ ಪರವಾನಿಗೆ ಮರುಪರಿಶೀಲನೆ ಮಾಡಬೇಕು.
ಮಾರ್ಗಸೂಚಿ ಫಲಕ: ಅಪಾಯಕಾರಿ ತಿರುವುಗಳು ಮತ್ತು ಪ್ರವಾಸಿ ತಾಣಗಳಲ್ಲಿ ಮಾರ್ಗಸೂಚಿ ಫಲಕ ಅಳವಡಿಕೆಗೆ ಸೂಚನೆ ನೀಡಲಾಗಿದೆ. ಪಟ್ಟಣ ಪಾರ್ಕಿಂಗ್ ಪ್ರಸ್ತಾವನೆ: ಕುಮಟಾ ಹಾಗೂ ಗೋಕರ್ಣ ಪಟ್ಟಣದಲ್ಲಿ ಪಾರ್ಕಿಂಗ್ ಸ್ಥಳ ಗುರುತಿಸಿ ಜಿಲ್ಲಾಧಿಕಾರಿಗೆ ಪ್ರಸ್ತಾವನೆ.
ಇದನ್ನೂ ಓದಿ : ಸುಗಮವಾಗಿ ಗಣೇಶೋತ್ಸವ ಆಚರಣೆಗೆ ಅವಕಾಶ ಕಲ್ಪಿಸಲು ಎಸ್ಪಿಗೆ ರೂಪಾಲಿ ನಾಯ್ಕ ಮನವಿ