ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಆರ್‌ಎಸ್‌ಎಸ್ ಇರದಿದ್ದರೆ ಭಾರತ ಮುಸ್ಲಿಮೀಕರಣವಾಗುತ್ತಿತ್ತು” ಎಂಬ ಜಗದೀಶ ಶೆಟ್ಟರ್ ಹೇಳಿಕೆ ವಿವಾದಕ್ಕೆ ತಿರುವು ಪಡೆದಿದೆ. ಕಾರ್ಮಿಕ ಸಚಿವ ಸಂತೋಷ ಲಾಡ್ ಕಾರವಾರದಲ್ಲಿ ಪ್ರತಿಕ್ರಿಯೆ ನೀಡಿದ್ದು ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ತಿರುಗೇಟು ನೀಡಿದ್ದಾರೆ.

ಬಿಜೆಪಿಯವರಿಗೆ ಹಿಂದು-ಮುಸ್ಲಿಮ್ ಅಜೆಂಡಾ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, “ಅಸ್ಪೃಶ್ಯತೆ ವ್ಯವಸ್ಥೆ, ಶೋಷಿತ ವರ್ಗಗಳು ತುಳಿತಕ್ಕೊಳಗಾದ ವಿಚಾರದಲ್ಲಿ ಯಾರೂ ಮಾತನಾಡುವುದಿಲ್ಲ. ಬೇರೆ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಹಿಂದುಗಳನ್ನು ವಾಪಸ್ ಕರೆಸಿಕೊಳ್ಳುತ್ತೀರಾ? ಬಾಂಗ್ಲಾದೇಶೀಯರನ್ನ ಹೊರಗೆ ಕಳುಹಿಸಬೇಕೆಂದು ಮಾತಾಡುತ್ತಾರೆ. ಯುಪಿಎ ಸರ್ಕಾರದಲ್ಲಿ ನಾವು ಎಷ್ಟು ಜನರನ್ನ ಹೊರಗೆ ಕಳುಹಿಸಿದ್ದೇವೆ, ಇವರ ಸರ್ಕಾರದಲ್ಲಿ ಎಷ್ಟು ಜನರನ್ನ ಕಳುಹಿಸಿದ್ದಾರೆ ಎಂಬುದಕ್ಕೆ ಅಂಕಿಅಂಶ ಕೊಡ್ತಾರಾ?” ಎಂದು ಪ್ರಶ್ನಿಸಿದರು.

ಜಗದೀಶ ಶೆಟ್ಟರ್ ಅವರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, “ನೀವೂ ಮುಖ್ಯಮಂತ್ರಿ ಆಗಿದ್ದೀರಿ, ಈಗ ಸಂಸದರಾಗಿದ್ದೀರಿ. ದೇಶಕ್ಕೆ ನಿಮ್ಮ ಪಕ್ಷ ಏನು ಮಾಡಿದೆ ಹೇಳಿ. 70ವರ್ಷಗಳಿಂದ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಚಾರ ಮಾಡ್ತಾರೆ, ನೆಹರು, ಗಾಂಧೀಜಿಯನ್ನು ಬೈಯುತ್ತಾರೆ. ಆದರೆ ಬಿಜೆಪಿ ಬಂದು 11ವರ್ಷ ಆಯ್ತು, ಹಿಂದುಗಳಿಗೆ ಏನು ಮಾಡಿದೆ?” ಎಂದು ಪ್ರಶ್ನಿಸಿದರು.

45ಲಕ್ಷ ಮಕ್ಕಳು ಜಿಸಿಸಿ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಉಲ್ಲೇಖಿಸಿದ ಲಾಡ್, “ಅವರನ್ನೆಲ್ಲಾ ವಾಪಸ್ ಕರೆಸಬೇಕಲ್ಲ. ಇಂಥ ಮುಖ್ಯ ವಿಷಯಗಳ ಬಗ್ಗೆ ಚರ್ಚೆ ಮಾಡುವುದಿಲ್ಲ, ಕೇವಲ ಧಾರ್ಮಿಕ ಭಾವನೆಗಳನ್ನು ಕೆದಕುವ ಮಾತು ಮಾಡುತ್ತಾರೆ” ಎಂದು ವಾಗ್ದಾಳಿ ನಡೆಸಿದರು.