ಸುದ್ದಿಬಿಂದು ಬ್ಯೂರೋ ವರದಿ (Suddibindu Digital News)
ಬಾಗಲಕೋಟೆ: ಎಲ್ಲರ ಗಮನ ಸೆಳೆದ ಸುಂದರ ಜೋಡಿ ಹೊಸ ಜೀವನದ ಕನಸು ಕಂಡಿತ್ತು. ಎಲ್ಲರೂ ಈ ಜೋಡಿಗೆ ಶುಭಾಶಯಗಳನ್ನು ಕೋರಿದ್ದರು. ಆದರೆ ವಿಧಿಯ ಆಟ ಮಾತ್ರ ಈ ಜೋಡಿಗೂ ಅವರ ಕುಟುಂಬಕ್ಕೂ ಖುಷಿಯಾಗಿರೋದಕ್ಕೆ ಮಾತ್ರ ಬಿಟ್ಟಿಲ್ಲ,‌ ಮದುವೆಯಾದ 15ನಿಮೀಷದಲ್ಲೆ ವರ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾನೆ.

ಹೊಸ ಬದುಕು ಆರಂಭಿಸಬೇಕಾದ ವರ ಪ್ರವೀಣ ಕುರ್ನೆ (26)ಮೃತಪಟ್ಟಿದ್ದಾರೆ. ಪುಟ್ಟ ಕ್ಷಣದಲ್ಲಿ ಮಧು ಎಂಬ ವಧು ವಿಧವೆ ಆಗಿದ್ದಾರೆ.ಮದುವೆ ಸಂಭ್ರಮದ ಬದಲು ದುಃಖದ ನೆರಳು ಆವರಿಸಿದೆ. ಬಾಗಲಕೋಟೆ ಜಿಲ್ಲೆ ಜಾಮಖಂಡಿ ನಗರದ ನಂದಿಕೇಶ್ವರ ಕಲ್ಯಾಣಮಂಟಪದಲ್ಲಿ ಶನಿವಾರ (ಮೇ 17) ಪ್ರವೀಣ ಅವರ ಮದುವೆ ಜರುಗಿತ್ತು. ಆದರೆ ಮದುವೆ ಸಂಭ್ರಮದ ಕ್ಷಣದಲ್ಲಿಲೇ‌ ಈ ದುರ್ಘಟನೆ ಸಂಭವಿಸಿದೆ. ಮದುವೆ ಮುಗಿದು ಕೇವಲ 15 ನಿಮಿಷಗಳಲ್ಲಿ ಪ್ರವೀಣ್ ಅವರಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.

ಮದುವೆಯಲ್ಲಿ ತಾಳಿ ಕಟ್ಟಿ ಹೊಸ ಜೋಡಿ ವೇದಿಕೆಯಲ್ಲಿ ಆಶೀರ್ವಾದ ಪಡೆಯಲು ನಿಂತಿದ್ದರು. ಎರಡು ಮೂರು ಫೋಟೋ ಕ್ಲಿಕ್ಕಿಸುವಷ್ಟರಲ್ಲೇ ಪ್ರವೀಣ್ ಅವರ ಕಾಲುಗಳು ಕಂಪಿಸಲು ಆರಂಭವಾಗಿದ್ದು, ಎದೆನೋವು ಕೂಡ ಕಾಣಿಸಿಕೊಂಡಿತು. ತಕ್ಷಣವೇ ಕುಟುಂಬದವರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಗಲೇ ಅವರ ಪ್ರಾಣ ಹಾರಿ ಹೋಗಿತ್ತು. ತಾಳಿ ಕಟ್ಟಿದ 15 ನಿಮಿಷಗಳಲ್ಲೇ ವಧು ವಿಧವೆ ಆಗಿದ್ದಾರೆ. ಸಂಭ್ರಮದ ಬದಲು ವರನ ಮನೆಯಲ್ಲಿ ಕಣ್ಣೀರು ಹರಿಯುತ್ತಿದೆ.

ಮೃತನಾದ ಪ್ರವೀಣ್ ಜಾಮಖಂಡಿ ತಾಲೂಕು ಕುಂಬಾರಹಳ್ಳಿ ಗ್ರಾಮದವರು. ಸದ್ಯ ಜಾಮಖಂಡಿ ನಗರದಲ್ಲಿ ವಾಸವಾಗಿದ್ದು. ವಧು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಪಾರ್ಥನಹಳ್ಳಿ ಗ್ರಾಮದವಳಾಗಿದ್ದಾಳೆ.

ಪ್ರವೀಣ ತಂದೆ ಶ್ರೀಶೈಲ ಕುರ್ನೆ ರಾಜ್ಯ ಸೈಕ್ಲಿಂಗ್ ಅಸೋಸಿಯೇಷನ್‌ನ ರಾಜ್ಯ ಕಾರ್ಯದರ್ಶಿಯಾಗಿದ್ದಾರೆ. ಪ್ರವೀಣ ಅವರು ಕುಟುಂಬದ ಹಿರಿಯ ಮಗನಾಗಿದ್ದು ಖಾಸಗಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರು. ಸಂಬಂಧಿಕರು ಸಂತೋಷದಿಂದ ನವ ಜೋಡಿಗೆ ಆಶೀರ್ವಾದ ಮಾಡಲು ಬಂದಿದ್ದರು. ಅತಿಥಿಗಳಿಗೆ ಭರ್ಜರಿ ಊಟವೂ ಸಿದ್ಧವಾಗಿತ್ತು. ಆದರೆ ಮದುವೆ ಮಾಡಿಕೊಂಡು ಸುಂದರ ಕುಟುಂಬ ಸ್ಥಾಪಿಸಬೇಕಿದ್ದ ವರ ಈಗ ಕುಟುಂಬದವರನ್ನ ಅಗಲಿದ್ದಾರೆ. ಸಪ್ತಪದಿ ತುಳಿದು ಸುಂದರ ಬದುಕಿನ ಕನಸು ಕಂಡಿದ್ದ ವರ ತಾಳಿ ಕೆಲವೇ ಕ್ಷಣಗಳಲ್ಲಿ ಕೊನೆಯುಸಿರೆಳೆದಿದ್ದಾನೆ.‌

ಇದನ್ನೂ ಓದಿ