ಸುದ್ದಿಬಿಂದು ಬ್ಯೂರೋ ವರದಿ
ಪ್ರೀತಿ, ಪ್ರಣಯದ ಹೆಸರಿನಲ್ಲಿ ಆರಂಭವಾದ ಸಂಬಂಧ ಕೊನೆಗೆ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ. ಮದುವೆಯಾಗಿ ಸಂಸಾರ, ಮಕ್ಕಳಿದ್ದರೂ ಹಳೆಯ ಪ್ರೀತಿಯ ವ್ಯಾಮೋಹ ಮಾತ್ರ ಕಡಿಮೆಯಾಗಿರಲಿಲ್ಲ. ತಮ್ಮ ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಿದ್ದಾನೆ ಎಂಬ ಕಾರಣಕ್ಕೆ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿರುವ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಿದ್ದರಾಮ ಪಾಟೀಲ್ ಕೊಲೆಯಾದ ದುರ್ದೈವಿ. ಪತ್ನಿ ಅಂಬಿಕಾ ಪಾಟೀಲ್ ಹಾಗೂ ಆಕೆಯ ಪ್ರಿಯಕರ ಮಾರುತಿ ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ. ಘಟನೆ ನಡೆದ ಕೇವಲ 24 ಗಂಟೆಯೊಳಗೆ ಮಳಖೇಡ ಪೊಲೀಸರು ಪ್ರಕರಣದ ರಹಸ್ಯವನ್ನು ಭೇದಿಸಿದ್ದಾರೆ.

10ನೇ ತರಗತಿಯಿಂದಲೇ ಪ್ರೀತಿ, ಮದುವೆಯಾದರೂ ನಿಲ್ಲದ ಸಂಬಂಧ.!
ಅಂಬಿಕಾ ಪಾಟೀಲ್ ಹಾಗೂ ಚಿತ್ತಾಪುರ ಮೂಲದ ಮಾರುತಿ ನಡುವೆ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಗಲೇ ಪ್ರೇಮಾಂಕುರವಾಗಿತ್ತು ಎನ್ನಲಾಗಿದೆ. ಆದರೆ ಕುಟುಂಬದವರ ಒತ್ತಾಯದ ಮೇರೆಗೆ ಅಂಬಿಕಾಳ ಮದುವೆ ಮಳಖೇಡ ಗ್ರಾಮದ ಸಿದ್ದರಾಮ ಪಾಟೀಲ್ ಜೊತೆ ನಡೆದಿತ್ತು. ಇತ್ತ ಮಾರುತಿಯೂ ಮದುವೆಯಾಗಿ ಪತ್ನಿ ಹಾಗೂ ಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದ.ಆದರೆ ಮದುವೆಯಾದ ಬಳಿಕವೂ ಅಂಬಿಕಾ ಮತ್ತು ಮಾರುತಿ ನಡುವಿನ ಕಳ್ಳ ಸಂಬಂಧ ಕಡಿಮೆಯಾಗಿರಲಿಲ್ಲ. ದಿನಕಳೆದಂತೆ ಇಬ್ಬರ ನಡುವಿನ ಅಕ್ರಮ ಸಂಬಂಧ ಮುಂದುವರಿದಿತ್ತು. ಪತಿ ಮನೆಯಲ್ಲಿರುವಾಗಲೇ ಆತನಿಗೆ ನಿದ್ರೆ ಮಾತ್ರೆ ನೀಡಿ, ಪ್ರಿಯಕರನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ.
ರಾಸಲೀಲೆ ಕಂಡ ಪತಿಗೆ ಕಾದಿತ್ತು ಸಾವು!
ಘಟನೆಯ ರಾತ್ರಿ ಕೂಡ ಸಿದ್ದರಾಮನಿಗೆ ನಿದ್ರೆ ಮಾತ್ರೆ ನೀಡಿ ಮಲಗಿಸಿದ್ದ ಅಂಬಿಕಾ,ಪ್ರಿಯಕರ ಮಾರುತಿಯನ್ನು ಮನೆಗೆ ಕರೆಸಿಕೊಂಡಿದ್ದಳು ಎನ್ನಲಾಗಿದೆ. ಈ ವೇಳೆ ನಿದ್ರೆಯಿಂದ ಎಚ್ಚರಗೊಂಡ ಸಿದ್ದರಾಮ ಪತ್ನಿ ಹಾಗೂ ಮಾರುತಿಯ ಅಕ್ರಮ ಸಂಬಂಧವನ್ನು ಕಣ್ಣಾರೆ ಕಂಡಿದ್ದಾನೆ.ಇದರಿಂದ ಆತಂಕಗೊಂಡ ಇಬ್ಬರೂ, ತಮ್ಮ ಸಂಬಂಧ ಬಯಲಾಗುವ ಭೀತಿಯಿಂದ ಸಿದ್ದರಾಮನ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ, ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಕೊಲೆ ಮಾಡಿ ಕಣ್ಣೀರು ಹಾಕಿದ ಪತ್ನಿ!
ಪತಿಯ ಕೊಲೆ ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ರಕ್ತಸಿಕ್ತ ಬಟ್ಟೆಗಳನ್ನು ಸ್ವಚ್ಛಗೊಳಿಸಿ, ಶವಕ್ಕೆ ಶುಭ್ರ ಬಟ್ಟೆಗಳನ್ನು ತೊಡಿಸಿ ಏನೂ ಅರಿಯದವಳಂತೆ ಅಂಬಿಕಾ ವರ್ತಿಸಿದ್ದಳು ಎನ್ನಲಾಗಿದೆ. ಪತಿ ರಾತ್ರಿ ಊಟಕ್ಕೆಂದು ಹೊರಗೆ ಹೋಗಿ ಯಾರೊಂದಿಗೋ ಜಗಳವಾಡಿಕೊಂಡು ಮನೆಗೆ ಬಂದಿದ್ದ. ಬಳಿಕ ಮಲಗಿದ್ದಾಗಲೇ ಮೃತಪಟ್ಟಿದ್ದಾನೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಳು. ಆದರೆ ಆಕೆಯ ಹೇಳಿಕೆ ಬಗ್ಗೆ ಅನುಮಾನಗೊಂಡ ಪೊಲೀಸರು ಅಂಬಿಕಾಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣದ ಹಿಂದಿನ ಅಸಲಿ ಸಂಗತಿ ಬಯಲಾಗಿದೆ. ವಿಚಾರಣೆ ವೇಳೆ ಕೊಲೆಯಲ್ಲಿ ತನ್ನ ಪಾತ್ರವನ್ನು ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.

