ಸುದ್ದಿಬಿಂದು ಬ್ಯೂರೋ
ಶಿರಸಿ : ಉತ್ತರ ಕನ್ನಡ(uttara Kannada)ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಆಗಬೇಕು ಎನ್ನುವುದು ಜಿಲ್ಲೆಯ ಜನರ ಬಹು ವರ್ಷಗಳ ಬೇಡಿಕೆಯಾಗಿದ್ದು, ಸುಸಜ್ಜಿತ ಆಸ್ಪತ್ರೆಯಿಲ್ಲದೇ ಸಾವಿರಾರು ಜನರು ಸಾವನ್ನಪ್ಪಿದ್ದಾರೆ.ಜಿಲ್ಲೆಗೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನ ನಿರ್ಮಿಸಿ ಜನರ ಜೀವ ಕಾಪಾಡಿ ಎಂದು ಮಲೆನಾಡಿನ ಹೆಬ್ಬಾಗಿಲು, ನಾಡಿನ ಶಕ್ತಿದೇವತೆ ಮಾರಿಕಾಂಬಾ ದೇವಾಲಯದಲ್ಲಿ(Marikamba Temple) ವಿಶೇಷ ಪೂಜೆ ಸಲ್ಲಿಸಿದ ಬಳಿಕ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕಾಶಿನಾಥ ಮೂಡಿ ಅವರು ಈ ಪಾದ ಯಾತ್ರೆಗೆ ಚಾಲನೆ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ರಾಜ್ಯದ ಗಡಿ ಜಿಲ್ಲೆ.ಗೋವಾ(goa) ಗಡಿಯಲ್ಲಿರುವ ಉತ್ತರ ಕನ್ನಡ ಭೌಗೋಳಿಕವಾಗಿ ಸಾಕಷ್ಟು ದೊಡ್ಡದಿದ್ದರೂ ಜಿಲ್ಲೆಯಲ್ಲಿ ಒಂದೇ ಒಂರು ಸುಸಜ್ಜಿತ ಆಸ್ಪತ್ರೆ ಇಲ್ಲದಿರುವುದು ಜನರಿಗೆ ದೊಡ್ಡ ಸಮಸ್ಯೆಯಾಗಿಯೇ ಕಾಡುತ್ತಿದೆ.ಇನ್ನು ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕು ಎಂದು ಹಲವಾರು ವರ್ಷಗಳಿಂದ ಜಿಲ್ಲೆಯ ಜನ ಹೋರಾಟ ನಡೆಸುತ್ತಿದ್ದರು ಸರ್ಕಾರ ಮಾತ್ರ ಈ ಬಗ್ಗೆ ಗಮನಹರಿಸಿಲ್ಲ.ಜಿಲ್ಲೆಯಲ್ಲಿ ಅಪಘಾತ, ಹೃದಯಾಘಾತ ಸೇರಿದಂತೆ ಗಂಭೀರ ಸಮಸ್ಯೆ ಆದರೆ ರೋಗಿಗಳನ್ನ ನೆರೆಯ ಉಡುಪಿ ಮಂಗಳೂರು, ಶಿವಮೊಗ್ಗ, ಗೋವಾ ಭಾಗದ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗುವ ಅನಿವಾರ್ಯ ಪರಿಸ್ಥಿತಿ ಇದೆ.
ಹೀಗಾಗಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ(Multi Specialty Hospital)ಬೇಕು ಎನ್ನುವ ಬಗ್ಗೆ ಈ ಹೋರಾಟ ನಡೆಸಲಾಗಿದೆ ಎಂದು ಪಾದಯಾತ್ರೆಗೆ ಚಾಲನೆ ನೀಡಿದ ಕಾಶಿನಾಥ ಮೂಡಿ ಅವರು ಹೇಳಿದ್ದರು.
ಅದೆಷ್ಟೋ ಜನರು ದಾರಿ ಮಧ್ಯೆಯೇ ಸಾವನ್ನಪ್ಪಿದ ಘಟನೆ ಸಹ ಇದೆ.ಇನ್ನು ಜಿಲ್ಲೆಯಿಂದ ಬೇರೆ ಜಿಲ್ಲೆಯ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗದೇ ಸಾವನ್ನಪ್ಪಿದ ಘಟನೆಗಳು ಸಹ ಇದೆ.ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲು ಸಾಮಾಜಿಕ ಕಾರ್ಯಕರ್ತ ಅನಂತ್ ಮೂರ್ತಿ ಹೆಗಡೆ ಅವರ ನೇತೃತ್ವದಲ್ಲಿ ಈ ಪಾದಯಾತ್ರೆ ಆರಂಭವಾಗಿದ್ದು.ಇಂದಿನಿಂದ ಎಂಟು ದಿನಗಳ ಕಾಲ ಪಾದಯಾತ್ರೆಯ ಮೂಲಕ ಸುಮಾರು 140 ಕಿಲೋ ಮೀಟರ್ ಸಂಚರಿಸಿ ಕಾರವಾರದಲ್ಲಿ ಬೃಹತ್ ಸಮಾವೇಶ ಮಾಡಲಿದ್ದಾರೆ. ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಆಗುವ ತನಕ ತಮ್ಮ ಹೋರಾಟ ನಡೆಯಲಿದೆ ಎಂದು ಅನಂತಮೂರ್ತಿ ಹೆಗಡೆ ತಿಳಿಸಿದ್ದಾರೆ.
ಈ ಪಾದಯಾತ್ರೆ ದೇವಿಮನೆ ಘಟ್ಟದ ಮಾರ್ಗವಾಗಿ ಕುಮಟಾ,ಅಂಕೋಲಾ ಮೂಲಕ ನವೆಂಬರ್ 9ಕ್ಕೆ ಈ ಪಾದಯಾತ್ರೆ ಕಾರವಾರ ತಲುಪಲಿದೆ. ಆಟೋ ಚಾಲಕ ಮಾಲಕ ಸಂಘ, ನಿವೃತ್ತ ಸೈನಿಕರು, ಹಲವು ಸಂಘ ಸಂಸ್ಥೆ ಮುಖಂಡರು ಹಾಗೂ ಸಾರ್ವಜನಿಕರು ಈ ಪಾದಯಾತ್ರೆಗೆ ಬೆಂಬಲ ನೀಡಿದ್ದಾರೆ. ಇನ್ನು ಅನಂತ್ ಮೂರ್ತಿ ಹೆಗಡೆ ಕಳೆದ ಹಲವಾರು ವರ್ಷಗಳಿಂದ ಆಟೋ ಚಾಲಕರಿಗೆ ಉಚಿತ ಪಾಸ್ ವಿತರಣೆ, ಬಡ ರೋಗಿಗಳಿಗೆ ಸಹಾಯ, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಹಾಯ ಹೀಗೆ ಹಲವು ಕಾರ್ಯಗಳನ್ನ ಮಾಡುತ್ತಾ ಬಂದಿದ್ದು ಸದ್ಯ ಜಿಲ್ಲೆಯ ಜನರ ಪ್ರಮುಖ ಬೇಡಿಕೆಯಾಗಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಹೋರಾಟವನ್ನ ಪ್ರಾರಂಭಿಸಿದ್ದಾರೆ.