
ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ತಾಲೂಕಿನ ದೊಡ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಓಂಕಾರ್ ಕಾಲೋನಿಯಲ್ಲಿ ಬಾವಿ ನೀರು ಕಪ್ಪು ಬಣ್ಣಕ್ಕೆ ತಿರುಗಿ, ಎಣ್ಣೆಯ ಪದರ ತೇಲುತ್ತಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬಾವಿ ನೀರಿನಿಂದ ಪೆಟ್ರೋಲ್ ಅಥವಾ ಡೀಸೆಲ್ನಂತಹ ತೀವ್ರ ವಾಸನೆ ಬರುತ್ತಿದ್ದು, ನೀರು ಬಳಕೆಗೆ ಅಯೋಗ್ಯವಾಗಿದೆ. ಕಳೆದ ಒಂದು ವಾರದಿಂದ ಈ ಸಮಸ್ಯೆ ಎದುರಾಗಿದ್ದು, ಕುಡಿಯುವ ನೀರಿಗಾಗಿ ನಿವಾಸಿಗಳು ಪರದಾಡುವಂತಾಗಿದೆ.
ಓಂಕಾರ್ ಕಾಲೋನಿಯ ಮೊದಲ ಕ್ರಾಸ್ನಲ್ಲಿ ಬಹುತೇಕ ಹಿರಿಯ ನಾಗರಿಕರು ವಾಸವಾಗಿದ್ದಾರೆ. ವಿಶ್ರಾಂತ ಜೀವನ ಕಳೆಯಲು ಇಲ್ಲಿ ನೆಲೆಸಿರುವವರಿಗೆ ಬಾವಿಯ ನೀರೇ ಪ್ರಮುಖ ಆಧಾರವಾಗಿತ್ತು. ಆದರೆ ಇದೀಗ ಬಾವಿಯ ನೀರಿನ ಮೇಲೆ ಎಣ್ಣೆಯ ದಪ್ಪ ಪದರ ಕಾಣಿಸಿಕೊಂಡಿದ್ದು, ನೀರು ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿದೆ. ಕುಡಿಯಲು, ಅಡುಗೆಗೆ ಹಾಗೂ ಸ್ನಾನಕ್ಕೂ ಬಳಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಅನಿವಾರ್ಯವಾಗಿ ದೂರದ ಪ್ರದೇಶಗಳಿಂದ ನೀರು ತರುವ ಸ್ಥಿತಿ ನಿವಾಸಿಗಳಿಗೆ ಎದುರಾಗಿದೆ.
ಗ್ರಿಡ್ ಆಯಿಲ್ ಸೋರಿಕೆಯೇ? ಪೆಟ್ರೋಲ್ ಬಂಕ್ ಕಾರಣವೇ?
ಬಾವಿ ನೀರು ಕಲುಷಿತಗೊಳ್ಳಲು ಕಾರಣವೇನು ಎಂಬ ಪ್ರಶ್ನೆ ಇದೀಗ ಎದುರಾಗಿದೆ. ಸಮೀಪದಲ್ಲಿರುವ ಎಸಳೆ ವಿದ್ಯುತ್ ಗ್ರಿಡ್ನ ಟ್ರಾನ್ಸ್ಫಾರ್ಮರ್ಗಳಿಗೆ ಬಳಸುವ ಆಯಿಲ್ ಸೋರಿಕೆಯಾಗಿ ಅಂತರ್ಜಲ ಸೇರಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ಮತ್ತೊಂದೆಡೆ ಸುತ್ತಮುತ್ತಲಿನ ಪೆಟ್ರೋಲ್ ಬಂಕ್ಗಳ ಭೂಗತ ಇಂಧನ ಟ್ಯಾಂಕ್ಗಳಿಂದ ಸೋರಿಕೆಯಾಗಿರಬಹುದೆಂಬ ಅನುಮಾನವೂ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಪ್ರೀತಿ ಶೆಟ್ಟಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಹೆಸ್ಕಾಂ ಎಇಇ ರಾಜುಕೃಷ್ಣ ಬಿಳಗಿ ಅವರನ್ನೂ ಸ್ಥಳಕ್ಕೆ ಕರೆಸಿ ಪರಿಶೀಲಿಸಿದಾಗ, ಗ್ರಿಡ್ನಿಂದ ಯಾವುದೇ ಆಯಿಲ್ ಸೋರಿಕೆಯಾಗಿಲ್ಲ ಎಂದು ಹೆಸ್ಕಾಂ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಬಾವಿಗೆ ಎಣ್ಣೆಯ ಅಂಶ ಸೇರಿರುವುದಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ನಿಗೂಢವಾಗಿದೆ.
ಪ್ರಾಥಮಿಕ ಪರೀಕ್ಷೆಯಲ್ಲಿ ನೀರು ಕುಡಿಯಲು ಯೋಗ್ಯವಲ್ಲ
ಗ್ರಾಮೀಣ ಕುಡಿಯುವ ನೀರು ಇಲಾಖೆಯ ಅಧಿಕಾರಿಗಳು ಬಾವಿಯ ನೀರಿನ ಮಾದರಿಯನ್ನು ಸಂಗ್ರಹಿಸಿ ಪ್ರಾಥಮಿಕ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಪರೀಕ್ಷೆಯಲ್ಲಿ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದಿದೆ ಎನ್ನಲಾಗಿದೆ. ಕಲುಷಿತಗೊಂಡಿರುವುದಕ್ಕೆ ನಿಖರ ಕಾರಣ ತಿಳಿಯಲು ನೀರಿನ ಮಾದರಿಯನ್ನು ಹೆಚ್ಚಿನ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಯೋಗಾಲಯದ ಅಂತಿಮ ವರದಿ ಬಂದ ಬಳಿಕವಷ್ಟೇ ಮಾಲಿನ್ಯದ ಮೂಲ ತಿಳಿಯಬೇಕಿದೆ.
ಶುದ್ಧ ನೀರು ಪೂರೈಸಲು ನಿವಾಸಿಗಳ ಆಗ್ರಹ
ಬಾವಿಯಲ್ಲಿ ತೈಲದ ಅಂಶ ಕಂಡುಬಂದಿರುವುದರಿಂದ ಬೆಂಕಿ ಅವಘಡ ಸಂಭವಿಸುವ ಸಾಧ್ಯತೆಯ ಬಗ್ಗೆಯೂ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಕಲುಷಿತ ನೀರನ್ನು ಬಳಸುವುದರಿಂದ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗಬಹುದು ಎಂಬ ಭೀತಿ ಎದುರಾಗಿದೆ.ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ತಕ್ಷಣವೇ ಟ್ಯಾಂಕರ್ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಬೇಕು. ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವೈಜ್ಞಾನಿಕ ಪರೀಕ್ಷೆ ನಡೆಸಬೇಕು. ತಜ್ಞರ ಮೂಲಕ ಸಮಗ್ರ ತನಿಖೆ ನಡೆಸಿ, ಮಾಲಿನ್ಯದ ಮೂಲ ಪತ್ತೆಹಚ್ಚಿ ಸೋರಿಕೆ ಇದ್ದಲ್ಲಿ ತಕ್ಷಣ ತಡೆಗಟ್ಟಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ, ಓಂಕಾರ್ ಕಾಲೋನಿಯ ಬಾವಿಯಲ್ಲಿ ಎಣ್ಣೆಯ ಅಂಶ ಕಾಣಿಸಿಕೊಂಡಿರುವುದು ಸ್ಥಳೀಯರ ನಿದ್ದೆಗೆಡಿಸಿದೆ. ನೀರಿನ ಮಾದರಿಯ ಅಂತಿಮ ಪ್ರಯೋಗಾಲಯ ವರದಿಗಾಗಿ ನಿವಾಸಿಗಳು ಕಾಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕಿದೆ.

