ಸುದ್ದಿಬಿಂದು ಬ್ಯೂರೋ ವರದಿ
ಯಲ್ಲಾಪುರ :ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ 2018 ಜುಲೈ 27ರಂದು ನಡೆದ ವಕೀಲ ಅಜಿತ್ ನಾಯಕ ಹತ್ಯೆ ಪ್ರಕರಣದಲ್ಲಿ ಮಹತ್ವದ ತೀರ್ಪು ಹೊರಬಿದ್ದಿದೆ. ಯಲ್ಲಾಪುರ ಸಂಚಾರಿ ನ್ಯಾಯಾಲಯ ಮೊದಲ ಆರೋಪಿಯನ್ನು ದೋಷಿ ಎಂದು ಘೋಷಿಸಿ, ಉಳಿದ ನಾಲ್ವರು ಆರೋಪಿಗಳನ್ನು ಸಾಕ್ಷ್ಯಾಭಾವದ ಹಿನ್ನೆಲೆಯಲ್ಲಿ ದೋಷಮುಕ್ತಗೊಳಿಸಿದೆ.
ಜಮೀನು ವಿವಾದದ ಹಿನ್ನೆಲೆ ವಕೀಲ ಅಜಿತ್ ನಾಯಕ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಸಾಂದರ್ಭಿಕ ಸಾಕ್ಷಿ ಹಾಗೂ ವೈಜ್ಞಾನಿಕ ಸಾಕ್ಷ್ಯಗಳ ಆಧಾರದಲ್ಲಿ ಮೊದಲ ಆರೋಪಿಯ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿದೆ.
ಈ ವೇಳೆ ಮೊದಲ ಆರೋಪಿಗೆ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ವಿಧಿಸಬೇಕು ಎಂದು ವಕೀಲ ರಾಜೇಶ್ ಮಾಳಗೇಕರ್ ನ್ಯಾಯಾಲಯದ ಮುಂದೆ ತೀವ್ರವಾಗಿ ವಾದ ಮಂಡಿಸಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶ ಕಿರಣ್ ಕಿಣಿ ಅವರು ಶಿಕ್ಷೆ ಕುರಿತು ಅಂತಿಮ ಆದೇಶವನ್ನು ಜನವರಿ 13ಕ್ಕೆ ಕಾಯ್ದಿರಿಸಿದ್ದಾರೆ.
ಕೊಲೆ ನಡೆದ ಎಂಟು ವರ್ಷಗಳ ಬಳಿಕ ಇದೀಗ ನ್ಯಾಯಾಲಯದ ತೀರ್ಪು ಪ್ರಕಟವಾಗಿದ್ದು, ಜನವರಿ 13ರಂದು ಮೊದಲ ಆರೋಪಿಗೆ ಜೀವಾವಧಿ ಅಥವಾ ಮರಣದಂಡನೆ ಯಾವುದು ವಿಧಿಸಲಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಇದನ್ನೂ ಓದಿ/ ಜೆಜೆಎಂ ಯೋಜನೆಯಲ್ಲಿ ನೀರು ಬಿಡಲು ಇನ್ನೆಷ್ಟು ಜನ್ಮ ಬೇಕು?




