ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಜಿಪಿಎಸ್ ಟ್ರಾಕರ್ ಹೊಂದಿದ್ದ ವಲಸೆ ಪಕ್ಷಿ ಪತ್ತೆಯಾಗಿರುವ ಘಟನೆ ಭದ್ರತಾ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಡಿಸೆಂಬರ್ 16ರಂದು ಕಾರವಾರ ಕಡಲತೀರದಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಸೀಗಲ್ ಹಕ್ಕಿ ಪತ್ತೆಯಾಗಿದ್ದು, ಅದರ ದೇಹಕ್ಕೆ ಜಿಪಿಎಸ್ ಟ್ರಾಕರ್ ಹಾಗೂ ರಿಂಗ್ ಅಳವಡಿಸಿರುವುದು ಆತಂಕಕ್ಕೆ ಕಾರಣವಾಗಿದೆ..
ಘಟನೆಗೆ ಸಂಬಂಧಿಸಿ ಪೊಲೀಸ್ ಇಲಾಖೆ ತನಿಖೆಯನ್ನು ಮುಂದುವರಿಸಿದ್ದು, ಪತ್ತೆಯಾದ ಜಿಪಿಎಸ್ ಟ್ರಾಕರ್ ಮತ್ತು ಎಲೆಕ್ಟ್ರಾನಿಕ್ ಡಿವೈಸ್ ಅನ್ನು ಇಲೆಕ್ಟ್ರಾನಿಕ್ ಡಿವೈಸ್ ಫಾರೆನ್ಸಿಕ್ ವಿಭಾಗಕ್ಕೆ ರವಾನೆ ಮಾಡಲಾಗಿದೆ. ಟ್ರಾಕರ್‌ನ ಉದ್ದೇಶ ಹಾಗೂ ಅದರಲ್ಲಿರುವ ಮಾಹಿತಿಯ ಬಗ್ಗೆ ತಜ್ಞರಿಂದ ಪರಿಶೀಲನೆ ನಡೆಯುತ್ತಿದೆ.
ಗಾಯಗೊಂಡ ಸೀಗಲ್ ಹಕ್ಕಿಯನ್ನು ಹೆಚ್ಚಿನ ಚಿಕಿತ್ಸೆಗೆ ಕಾಳಿ ಹುಲಿ ಸಂರಕ್ಷಿತ ಅರಣ್ಯಕ್ಕೆ ಕಳುಹಿಸಲಾಗಿದೆ. ಅರಣ್ಯ ಇಲಾಖೆ ಮಾಹಿತಿ ಪ್ರಕಾರ, ಇದು ಸೈಬೀರಿಯನ್ ವಲಸೆ ಪಕ್ಷಿಯಾಗಿದ್ದು, ಅದರ ಚಲನವಲನ ಅಧ್ಯಯನಕ್ಕಾಗಿ ಸಾಮಾನ್ಯವಾಗಿ ಕಾಲರ್ ಐಡಿ ಅಥವಾ ಟ್ರಾಕರ್ ಅಳವಡಿಸಲಾಗುತ್ತದೆ.
ಈ ಜಿಪಿಎಸ್ ಟ್ರಾಕರ್ ಅನ್ನು ಚೈನಿಸ್ ಅಕಾಡೆಮಿ ಆಫ್ ಸೈನ್ಸಸ್ ವತಿಯಿಂದ ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ. ಟ್ರಾಕರ್‌ನಲ್ಲಿ ಇಮೇಲ್ ಐಡಿ ಒಂದಿದ್ದು, ಪಕ್ಷಿ ಪತ್ತೆಯಾದಲ್ಲಿ ಸಂಪರ್ಕಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ, ಶ್ರೀಲಂಕಾದಲ್ಲಿ ಈ ಪಕ್ಷಿಗಳ ಕುರಿತು ಅಧ್ಯಯನ ಕಾರ್ಯಕ್ರಮ ನಡೆಯುತ್ತಿರುವ ಮಾಹಿತಿ ಲಭ್ಯವಾಗಿದೆ.
“ಇದು ಸಂಪೂರ್ಣವಾಗಿ ಅಧ್ಯಯನ ಉದ್ದೇಶಕ್ಕಾಗಿ ಅಳವಡಿಸಿರುವ ಡಿವೈಸ್ ಆಗಿದೆಯೇ ಅಥವಾ ಬೇರೆ ಯಾವುದೇ ಉದ್ದೇಶವಿದೆಯೇ ಎಂಬುದನ್ನು ತಿಳಿದುಕೊಳ್ಳಲು ತನಿಖೆ ನಡೆಯುತ್ತಿದೆ” ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ತಿಳಿಸಿದ್ದಾರೆ.
ಪ್ರಕರಣದ ಬಗ್ಗೆ ಪೊಲೀಸರು, ಅರಣ್ಯ ಇಲಾಖೆ ಹಾಗೂ ಫಾರೆನ್ಸಿಕ್ ತಜ್ಞರು ಜಂಟಿಯಾಗಿ ಪರಿಶೀಲನೆ ನಡೆಸುತ್ತಿದ್ದು, ತನಿಖೆಯ ಬಳಿಕ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.


