ಸುದ್ದಿಬಿಂದು ಬ್ಯುರೋ ವರದಿ
ಕಾರವಾರ: ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನ, ಬೆಂಗಳೂರು (ರಿ.) ಮೂಲಕ ರಾಜ್ಯದ ಆರ್ಥಿಕವಾಗಿ ಹಿಂದುಳಿದ, ಪ್ರತಿಭಾನ್ವಿತ ಈಡಿಗ ಹಾಗೂ 26 ಉಪ ಪಂಗಡಗಳ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಜೆ.ಪಿ.ಎನ್.ಪಿ. ವಿದ್ಯಾರ್ಥಿವೇತನವನ್ನ ನಿರಾಕರಿಸಲಾಗಿದೆ.ಪ್ರತಿಷ್ಠಾನವು ಯಾವುದೇ ವ್ಯಕ್ತಿಗಳ ಮಾತನ್ನು ಆಲಿಸದೆ, ಜಿಲ್ಲೆಯ ನಾಮಧಾರಿ, ಈಡಿಗ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜೆ.ಪಿ.ಎನ್.ಪಿ. ವಿದ್ಯಾರ್ಥಿವೇತನ ಮುಂದುವರೆಸುವಂತೆ ನಾರಾಯಣಸ್ವಾಮಿ ಪ್ರತಿಷ್ಠಾನ ಉತ್ತರ ಕನ್ನಡ ಜಿಲ್ಲಾ ಘಟಕ ಆಗ್ರಹಿಸಿದೆ.

ಈ ಬಗ್ಗೆ ಕಾರವಾರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನದ ಉತ್ತರ ಕನ್ನಡ ಜಿಲ್ಲಾ ಘಟಕದ ಜಿಲ್ಲಾ ಮುಖ್ಯ ಸಂಚಾಲಕ ಡಾ. ನಾಗೇಶ ನಾಯ್ಕ ಅವರು ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನ, ಬೆಂಗಳೂರು (ರಿ.) ಮೂಲಕ ಕಳೆದ ಏಳು ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯ 120ಕ್ಕೂ ಅಧಿಕ ಪ್ರತಿಭಾನ್ವಿತರಿಗೆ ಪ್ರತಿವರ್ಷ 7–10 ಲಕ್ಷ ರೂ. ಮೊತ್ತದ ನೆರವು ನೀಡಲಾಗಿದೆ. ಆದರೆ 2025–26ನೇ ಸಾಲಿನ ಪ್ರತಿಭಾ ಪುರಸ್ಕಾರಕ್ಕಾಗಿ ಉತ್ತರ ಕನ್ನಡ ಜಿಲ್ಲೆಯ ಪ್ರತಿಭೆಗಳನ್ನು ನಿರಾಕರಿಸಲಾಗಿದೆ.ಇದಕ್ಕೆ ನಮ್ಮಲ್ಲಿನ ಗೊಂದಲವೇ ಕಾರಣವೆಂದು ಕಂಡುಬರುತ್ತಿದೆ. ನಮ್ಮ ಸಮಾಜದ ಕೆಲ ವ್ಯಕ್ತಿಗಳಿಂದಲೇ ಜಿಲ್ಲೆಯ ಬಡ ಹಾಗೂ ಪ್ರತಿಭಾವಂತರಿಗೆ ಸಿಗಬೇಕಾದ ವಿದ್ಯಾರ್ಥಿ ವೇತನ ಮತ್ತು ಆರ್ಥಿಕ ನೆರವು ಕೈ ತಪ್ಪುವಂತಾಗಿದೆ.

ಮುಂದಿನ ದಿನಗಳಲ್ಲಿ ಇಂತಹ ಘಟನೆ ಸಂಭವಿಸದಂತೆ ನೋಡಿಕೊಳ್ಳಬೇಕಿದೆ. ನಾಮಧಾರಿ, ದೀವರು, ಈಡಿಗ, ಬಿಲ್ಲವ ಸೇರಿದಂತೆ ವಿವಿಧ ಉಪ ಪಂಗಡಗಳ ಐಕ್ಯತೆಯನ್ನು ಕಾಪಾಡಿಕೊಂಡು, ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ ‘ನಾವೆಲ್ಲ ಒಂದು’ ಎಂಬ ಮನೋಭಾವದೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಪ್ರತಿಭೆಗಳನ್ನು ಗುರುತಿಸಿ, ಆರ್ಥಿಕ ನೆರವು, ಬೃಹತ್ ನಗರಗಳ ಹಾಸ್ಟೆಲ್ ಸೌಲಭ್ಯ ಮತ್ತು ಬಲವಂತವಿಲ್ಲದ, ಅನಾಥರ ಸಂಕಷ್ಟಗಳಿಗೆ ನೆರವು ನೀಡುವ ಕಾರ್ಯ ಮುಂದುವರಿಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕೆಲವರ ಅಪಸ್ವರಗಳಿಗೆ ಹೆಚ್ಚಿನ ಮಹತ್ವ ನೀಡದೆ, ಕಾರಣಾಂತರಗಳಿಂದ ಉತ್ತರ ಕನ್ನಡ ಜಿಲ್ಲೆಯ ಪ್ರತಿಭೆಗಳಿಗೆ ಜೆ.ಪಿ.ಎನ್.ಪಿ. ವಿದ್ಯಾರ್ಥಿವೇತನ ನಿರಾಕರಿಸಿರುವ ನಿರ್ಧಾರವನ್ನು ತಕ್ಷಣ ಹಿಂಗೆದುಗೊಳ್ಳಬೇಕೆಂದು ಉತ್ತರ ಕನ್ನಡ ಜಿಲ್ಲಾ ಘಟಕ ಮನವಿ ಮಾಡಿದೆ. ಪತ್ರಿಕಾಗೋಷ್ಠಿಯಲ್ಲಿ ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನ, ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕು ಮುಖ್ಯ ಸಂಚಾಲಕ ಸುನಿಲ್ ಸೋನಿ ಎಸ್. ನಾಯ್ಕ, ವಿ ಎನ್ ನಾಯ್ಕ ಸಿದ್ದಾಪುರ, ಎಸ್. ಬಿ. ನಾಯ್ಕ, ಡಿ ಜಿ ನಾಯ್ಕ, ಶ್ರೀಧರ ನಾಯ್ಕ ಭಟ್ಕಳ, ಸುಭಾಶ್ಚಂದ್ರ ಆರ್ ನಾಯ್ಕ, ಕೆ ಆರ್. ನಾಯ್ಕ, ಎಂ ಡಿ ನಾಯ್ಕ, ಭಟ್ಕಳ, ವೀರಭದ್ರ ನಾಯ್ಕ ಸಿದ್ದಾಪುರ, ರಾಮಕೃಷ್ಣ ನಾಯ್ಕ, ರಾಘವೇಂದ್ರ ನಾಯ್ಕ ಸೇರಿದಂತೆ ಮೊದಲಾದವರು ಹಾಜರಿದ್ದರು..