ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಗೋವಾದಿಂದ ನವದೆಹಲಿಗೆ ತೆರಳುತ್ತಿದ್ದ ವಿಮಾನದಲ್ಲಿ ಅಸ್ವಸ್ಥಗೊಂಡಿದ್ದ  ವಿದೇಶಿ ಮಹಿಳೆಯೊಬ್ಬರಿಗೆ, ಖಾನಾಪುರದ ಮಾಜಿ ಶಾಸಕಿ  ಡಾ. ಅಂಜಲಿ ನಿಂಬಾಳ್ಕರ್ ಅವರು ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ವಿಮಾನ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ, ಅಮೆರಿಕ ಮೂಲದ ಮಹಿಳೆಯೊಬ್ಬರಿಗೆ ತೀವ್ರ ನಡುಕ ಉಂಟಾಗಿ ಪ್ರಜ್ಞೆ ತಪ್ಪಿ ಕುಸಿದುಬಿದ್ದಿದ್ದರು. ಹಠಾತ್ ನಡೆದ ಈ ಘಟನೆಯಿಂದ ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿಯಲ್ಲಿ ಆತಂಕ ಮೂಡಿತ್ತು. ಈ ಸಂದರ್ಭದಲ್ಲಿ ಪರಿಸ್ಥಿತಿಯ ತೀವ್ರತೆಯನ್ನು ಅರಿತ ಡಾ. ಅಂಜಲಿ ನಿಂಬಾಳ್ಕರ್ ಅವರು ತಕ್ಷಣ ಮಧ್ಯಪ್ರವೇಶಿಸಿ ವೈದ್ಯಕೀಯ ನೆರವು ನೀಡಿದರು.

ಹೊನ್ನಾವರದ ಖಾಸಗಿ ಬಸ್ ಚಾಲಕನ ರಾಸಲೀಲೆ : ಇನ್‌ಸ್ಟ್ರಾ‌ಗ್ರಾಮ್‌ನಲ್ಲಿ ಅಪ್ಲೋಡ್..!

ಯುವತಿಯ ನಾಡಿಮಿಡಿತ ಕ್ಷೀಣಗೊಂಡಿದ್ದು, ಸ್ಥಿತಿ ಗಂಭೀರವಾಗಿದ್ದುದರಿಂದ ಡಾ. ಅಂಜಲಿ ಅವರು ತಮ್ಮ ವೈದ್ಯಕೀಯ ಪರಿಣತಿಯನ್ನು ಬಳಸಿಕೊಂಡು ತಕ್ಷಣ ಸಿಪಿಆರ್ (CPR) ಪ್ರಕ್ರಿಯೆ ಆರಂಭಿಸಿದರು. ಕೆಲ ಸಮಯದ ಸತತ ಪ್ರಯತ್ನದ ಬಳಿಕ ಯುವತಿಯ ಉಸಿರಾಟದ ಸಮಸ್ಯೆ ಸರಿಯಾಗಿದೆ..

ಆದರೆ, ಸುಮಾರು ಅರ್ಧ ಗಂಟೆ ಬಳಿಕ ಆಕೆ ಮತ್ತೆ ಪ್ರಜ್ಞೆ ತಪ್ಪಿದಾಗ ಆತಂಕ ಮತ್ತಷ್ಟು ಹೆಚ್ಚಾಯಿತು. ಈ ಹಂತದಲ್ಲೂ ಧೈರ್ಯ ಕಳೆದುಕೊಳ್ಳದ ಡಾ. ಅಂಜಲಿ ಅವರು ತುರ್ತು ಚಿಕಿತ್ಸೆ ನೀಡಿ ಆಕೆಯನ್ನು ಸ್ಥಿರ ಸ್ಥಿತಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ವಿಮಾನ ದಿಲ್ಲಿಗೆ ತಲುಪುವವರೆಗೂ ಯುವತಿಯ ಪಕ್ಕದಲ್ಲೇ ಇದ್ದು, ಆರೋಗ್ಯ ಸ್ಥಿತಿಯನ್ನು ನಿರಂತರವಾಗಿ ಗಮನಿಸಿದ ಅವರು, ಲ್ಯಾಂಡ್ ಆಗುವ ಮೊದಲು ಸಂಬಂಧಿತ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ತುರ್ತು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಸಿದರು. ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸುವ ಪ್ರಕ್ರಿಯೆಯನ್ನೂ ಸ್ವತಃ ಮೇಲ್ವಿಚಾರಣೆ ನಡೆಸಿದರು.

ರಾಜಕೀಯ ಜೀವನದ ಜೊತೆಗೆ ವೈದ್ಯೆಯಾಗಿ ತಮ್ಮ ಕರ್ತವ್ಯವನ್ನು ಅತ್ಯಂತ ಮಾನವೀಯವಾಗಿ ನಿಭಾಯಿಸಿದ ಡಾ. ಅಂಜಲಿ ನಿಂಬಾಳ್ಕರ್ ಅವರ ಈ ಕಾರ್ಯ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ..

ಇದನ್ನೂ ಓದಿ/ Indian-Navy/ನೌಕಾನೆಲೆ ವಜ್ರಕೋಶದಲ್ಲಿ ರಹಷ್ಯ ಸ್ಪೋಟ ವಿಚಾರ : ನೌಕಾಪಡೆ ಸ್ಪಷ್ಟನೆ