ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಮಕ್ಕಳು ದೇವರ ಸಮಾನ ಎಂತಾರೆ. ಆದ್ರೆ ಇಲ್ಲೊಬ್ಬ ತಂದೆ ತನ್ನ ಏಳು ವರ್ಷದ ಮಗನಿಗೆ ಚಿತ್ರಹಿಂಸೆ ನೀಡುವ ಮೂಲಕ ಅಮಾನುಷ್ಯ ಕೃತ್ಯ ವೆಸಗಿರುವ ಪ್ರಕರಣ ಹೆಗಡೆ ಗ್ರಾಮದಲ್ಲಿ ನಡೆದಿದೆ..

ಒಂದನೇ ತರಗತಿ ಓದುತ್ತಿರುವ ಬಾಲಕನ ಕೈ ಮೇಲೆ ಬರೆ ಹಾಕಲಾಗಿದ್ದು, ಅಂಗೈ ಸುಟ್ಟು ಹೋಗಿದೆ. ಕಣ್ಣಿಗೆ ಕಾರಾಪುಡಿ ಎರಚಿ ಥಳಿಸಲಾಗಿದೆ. ಬಾಲಕನ ದುಃಸ್ಥಿತಿ ನೋಡಿದರೆ ಎಂಥವರ ಮನಸ್ಸು ಕೂಡ ಕರಗತ್ತೆ. ಆದರೆ ಈ ಅಪ್ಪ ಎನಿಸಿಕೊಂಡ ಮಹಾಶಯನಿಗೆ ಮಾತ್ರ ಕುರಣೆಯೇ ಇಲ್ಲ ಎಂಬುದು ಈ ಪುಟ್ಟ ಬಾಲಕ ದುಃಸ್ಥಿತಿ ನೋಡಿದರೆ ತಿಳಿಯುತ್ತದೆ.

ಬಾಲಕನ ತಂದೆ ಹೆಸರು ವಿಜಯ ನಾಯ್ಕ ಆಗಿದ್ದು, ತಾಯಿ ಚಿತ್ರಾ ನಾಯ್ಕ ಆಗಿದ್ದಾಳೆ. ಇವರಿಬ್ಬರ ವಿವಾಹ 13 ವರ್ಷಗಳ ಹಿಂದೆ ಆಗಿತ್ತು. ಹೆಣ್ಣು ಮತ್ತು ಗಂಡು ಮಕ್ಕಳನ್ನು ಹೊಂದಿದ್ದರು, ಕೆಲ ವರ್ಷಗಳಿಂದ ಈ ದಂಪತಿಯ ಸಂಸಾರದಲ್ಲಿ ಬಿರುಕು ಮೂಡಿದ ಪರಿಣಾಮ ವಿಚ್ಚೇದನ ಪ್ರಕರಣದಲ್ಲಿ ದಂಪತಿಯ ಸಂಸಾರ ಮುರಿದುಬಿದ್ದಿದೆ. ಇಬ್ಬರು ಮಕ್ಕಳ ಜವಾಬ್ದಾರಿಯನ್ನು ಕೋರ್ಟ್ ತಂದೆಯಾದ ವಿಜಯ ನಾಯ್ಕರಿಗೆ ಒಪ್ಪಿಸಲಾಗಿತ್ತು.

ಕುಮಟಾ ತಾಲೂಕಿನ ಹೆಗಡೆಯಲ್ಲಿ ಬಾಡಿಗೆ ಮನೆ ಪಡೆದು ತನ್ನ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ ವಿಜಯ ತನ್ನ ಪ್ರಿಯತಮೆಯನ್ನು ಕೂಡ ಅದೇ ಮನೆಯಲ್ಲಿ ಇರಿಸಿಕೊಂಡಿದ್ದ. ಆದರೆ ಮಗನಿಗೆ ತನ್ನಮ್ಮ ಬೇಕು ಎಂದು ಆಗಾಗಾ ಅತ್ತು, ರೇಗಾಡುತ್ತಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ಅಪ್ಪನಾದ ವಿಜಯ ಚಿಕ್ಕ ಮಗನ ಮೇಲೆ ಹಲ್ಲೆ ನಡೆಸಿ, ಹಿಂಸೆ ನೀಡುತ್ತಿದ್ದ ಎಂದು ಆ ಬಾಲಕ ಸೇರಿದಂತೆ ಆತನ ಅಮ್ಮ ಚಿತ್ರ ಕೂಡ ಆರೋಪಿಸಿದ್ದಾರೆ.

ಬಾಲಕನ ದೇಹದ ಮೇಲೆಲ್ಲ ಗಾಯದ ಗುರುತುಗಳು ಪತ್ತೆಯಾಗಿದೆ. ಹಾಗಾಗಿ ಈ ಬಾಲಕ ಕಳೆದ ಒಂದು ತಿಂಗಳಿಂದ ಶಾಲೆಗೆ ಹೋಗದೆ ಮನೆಯಲ್ಲಿಯೇ ಇದ್ದ. ಶಿಕ್ಷಕರು ಮಗು ಶಾಲೆಗೆ ಬರುತ್ತಿಲ್ಲ ಎಂದು ತಂದೆ ವಿಜಯ ಅವರಿಗೆ ಕರೆಮಾಡಿದ್ದರಂತೆ. ಇದಕ್ಕೆ ವಿಜಯ ಅವರು ಮಗುವಿಗೆ ಆರೋಗ್ಯ ಸರಿ ಇಲ್ಲದ ಕಾರಣ ಶಾಲೆಗೆ ಕಳಿಸಿಲ್ಲ ಎಂಬ ಉತ್ತರ ನೀಡಿದ್ದರಂತೆ. ಆದರೆ ಅದೇ ಶಾಲೆಗೆ ಚಿತ್ರಾಳ ಪುತ್ರಿಯೂ ಸಹ ವ್ಯಾಸಂಗ ಮಡುತ್ತಿದ್ದಳು. ತನ್ನ ತಮ್ಮನ ಮೇಲೆ ತಂದೆ ನಡೆಸುತ್ತಿರುವ ಹಲ್ಲೆಯಿಂದ ಭಯಗೊಂಡ ಪುತ್ರಿಯು ಅಮ್ಮನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಇದರಿಂದ ಗಾಬರಿಗೊಂಡ ಚಿತ್ರಾ ಪೊಲೀಸರ ಭದ್ರತೆಯಲ್ಲಿ ಹೆಗಡೆಯಲ್ಲಿರುವ ಮನೆಗೆ ಹೋಗಿ ನೋಡಿದಾಗ ತನ್ನ ಪುಟ್ಟ ಮಗನಿಗೆ ಬಾತ್‌ರೂಮ್ ನಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿರುವುದನ್ನು ನೋಡಿ ಕಂಗಾಲ್ ಆಗಿದ್ದಾರೆ.

ತಕ್ಷಣ ತನ್ನ ಮಗನನ್ನು  ಕುಮಟಾದ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಈ ಬಗ್ಗೆ ಕುಮಟಾ ಠಾಣೆ ಪೊಲೀಸರು ಕೂಡ ಮಾಹಿತಿ ಕಲೆ ಹಾಕಿ, ಅಗತ್ಯ ಕಾನೂನು ಕ್ರಮ ಕೈಗೊಳ್ಳಲು ಸಿದ್ದತೆ ನಡೆಸಿದ್ದಾರೆ. ಅಲ್ಲದೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೂ ಈ ಬಗ್ಗೆ ಮಾಹಿತಿ ದೊರೆತಿದ್ದು, ಅವರು ಕೂಡ ತಾಯಿ-ಮಗನನ್ನು ವಿಚಾರಣೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಅಪ್ಪನ ಚಿತ್ರಹಿಂಸೆಯಿಂದ ಪೀಡಿತನಾದ ಬಾಲಕನಿಗೆ ಸೂಕ್ತ ರಕ್ಷಣೆ ಮತ್ತು ಭದ್ರತೆ ದೊರಕಿಸಿಕೊಡುವಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಗತ್ಯ ಕ್ರಮ ವಹಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಇದನ್ನೂ ಓದಿ/ಕಾಂಡ್ಲಾ ವನಗಳು ಸಾಗರ ತೀರಗಳ ರಕ್ಷಾ ಕವಚ: ಎ.ಸಿ.ಎಫ್ ಕೃಷ್ಣೇ ಗೌಡ