ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಪಟ್ಟಣದ ಗಿಬ್ ಸರ್ಕಲ್ ಬಳಿಯ ಬ್ಯಾಟರಿ ಶಾಪ್‌ನಲ್ಲಿ ನಡೆದ ಕಳ್ಳತನ ಪ್ರಕರಣದ ಆರೋಪಿಗಳನ್ನು ಮೆಡಿಕಲ್ ಮಾಡಲು ತಾಲೂಕು ಆಸ್ಪತ್ರೆಗೆ ಕರೆದೊಯ್ಯುವಾಗ ಪೊಲೀಸರ ಕೈಯಿಂದ ಓರ್ವ ಆರೋಪಿ ತಪ್ಪಿಸಿಕೊಂಡು ಪರಾರಿಯಾದ ಘಟನೆ ನಡೆದಿದೆ.
ಗಿಬ್ ಸರ್ಕಲ್ ಬಳಿಯ ಅಮರಾನ್ ಬ್ಯಾಟರಿ ಶಾಪ್‌ನಲ್ಲಿ ಇತ್ತೀಚೆಗೆ ಕಳ್ಳತನ ನಡೆದಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಭಟ್ಕಳ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿ, ಮೆಡಿಕಲ್ ಮಾಡಲು ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು ಇಬ್ಬರು ಆರೋಪಿಗಳಿಗೆ ಮೆಡಿಕಲ್ ಮಾಡಿಸಿ, ವಾಪಸ್ ತೆರಳುವಾಗ ಓರ್ವ ಆರೋಪಿ ಪೊಲೀಸ್‌ರ ಕೈಯಿಂದ ತಪ್ಪಿಸಿಕೊಂಡು ಆಸ್ಪತ್ರೆಯ ಕಂಪೌಂಡ್ ಹಾರಿ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಆತನನ್ನುಹಿಡಿಯಲು ಹೋದ ಪೊಲೀಸರು ಕೂಡ ಕಂಪೌಂಡ್ ಹಾರಲು ಹೋಗಿ ಗಾಯಗೊಂಡಿದ್ದಾರೆ.
ಆರೋಪಿಯು ತಪ್ಪಿಸಿಕೊಳ್ಳುವ ಭರದಲ್ಲಿ ಬಗ್ಗೋಣ ರಸ್ತೆಯ ಸಿಂಧೂರು ಬೇಕರಿ ಪಕ್ಕದ ಗೇಟ್ ಒಳಗಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಈ ಘಟನೆ ಶುಕ್ರವಾರ ಸಂಜೆ ನಡೆದಿದ್ದರಿಂದ ಕತ್ತಲಲ್ಲಿ ಆರೋಪಿ ಎಲ್ಲಿ ತಪ್ಪಿಸಿಕೊಂಡು ಹೋದ ಎಂದು ತಿಳಿಯದಂತಾಗಿದೆ. ಪೊಲೀಸರು ಪಟ್ಟಣದ ಹಳೇ ಹೆರವಟ್ಟಾ, ಬಗ್ಗೋಣ ಸೇರಿದಂತೆ ಎಲ್ಲೆಡೆ ಹುಡುಕಾಟ ನಡೆಸುತ್ತಿದ್ದಾರೆ. ಈ ಆರೋಪಿ ಸ್ಥಳೀಯರಿಗೆ ಕಂಡುಬಂದರೆ ‘ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08386-222333ಈ ನಂಬರ್‌ಗೆ ಮಾಹಿತಿ ನೀಡುವಂತೆ ಕೋರಲಾಗಿದೆ.