ಕೆಡಿಸಿಸಿ ಬ್ಯಾಂಕಿನ 105 ವರ್ಷದ ಇತಿಹಾಸದಲ್ಲಿ ಈವರೆಗೆ ಒಬ್ಬರು ಮಹಿಳಾ ನಿರ್ದೇಶಕರಾಗಿಲ್ಲ. ಶತಮಾನದ ಅವಧಿಯಲ್ಲಿ ಈ ಬ್ಯಾಂಕು ಒಮ್ಮೆಯೂ ಮಹಿಳಾ ನಿರ್ದೇಶಕರನ್ನು ನೋಡಿಲ್ಲ!
ಎಲ್ಲಡೆ ಮಹಿಳೆಯರಿಗೆ ಶೇ 33ರ ಮೀಸಲಾತಿ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ಬ್ಯಾಂಕಿಂಗ್ ಆಡಳಿತ ವಲಯದಲ್ಲಿ ಮಹಿಳಾ ಮೀಸಲಾತಿ ಎಂಬುದು ದೊಡ್ಡ ಪ್ರಮಾಣದಲ್ಲಿಲ್ಲ. ಹೀಗಾಗಿ ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಮಂಡಳಿಯಲ್ಲಿ ಈವರೆಗೂ ಮಹಿಳೆಯರು ಮುಖ್ಯ ವಾಹಿನಿಗೆ ಬಂದಿಲ್ಲ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ಸರಸ್ವತಿ ಎನ್ ರವಿ ಅವರು ಆಸಕ್ತಿಹೊಂದಿದ್ದಾರೆ. ಬ್ಯಾಂಕಿನ ಪ್ರತಿನಿಧಿಯಾಗುವುದಕ್ಕಾಗಿ ಅವರು ಹಿರಿಯ ಸಹಕಾರಿಗಳ ಆಶೀರ್ವಾದದೊಂದಿಗೆ ಓಡಾಟ ನಡೆಸಿದ್ದಾರೆ.
ಸಹಕಾರಿ ಕ್ಷೇತ್ರದಲ್ಲಿನ ಅನುಭವವೇ ಸರಸ್ವತಿ ಎನ್ ರವಿ ಅವರಿಗೆ ಶ್ರೀರಕ್ಷೆ. ಅವರ ಸೌಮ್ಯ ಸ್ವಭಾವ, ಅನ್ಯಾಯದ ವಿರುದ್ಧ ಹೋರಾಡುವ ಹಠ, ಪಾರದರ್ಶಕ ಆಡಳಿತದ ಮನಸ್ಸು ಹಾಗೂ ಉನ್ನತ ವಿದ್ಯಾರ್ಹತೆ ಸಹಕಾರಿ ಕ್ಷೇತ್ರದ ಯಶಸ್ಸಿಗೆ ಸಹಕಾರಿ. ಇದೇ ಆಧಾರದಲ್ಲಿ ಸರಸ್ವತಿ ಎನ್ ರವಿ ಅವರು ಪ್ರಜ್ಞಾವಂತ ಮತದಾರರ ಮನವೊಲೈಸುವ ಕೆಲಸ ಮಾಡುತ್ತಿದ್ದಾರೆ. ಹಿರಿಯ ಸಹಕಾರಿಗಳ ಸಹಕಾರದಲ್ಲಿ ಅವರು ಮತ ಯಾಚನೆ ಶುರು ಮಾಡಿದ್ದು, ಪ್ರಚಾರದ ಅವಧಿಯಲ್ಲಿ ಉತ್ತಮ ಸ್ಪಂದನೆ ಸಿಗುತ್ತಿದೆ.
ಈಗಾಗಲೇ ಜಿಲ್ಲೆಯ ಎಲ್ಲಾ ಕಡೆ ಓಡಾಡಿರುವ ಅವರು ಒಂದು ಸುತ್ತಿನ ಪ್ರಚಾರ ಮುಗಿಸಿದ್ದಾರೆ. `ಸಹಕಾರಿ ಕ್ಷೇತ್ರ ಶುದ್ಧವಾಗಿರಬೇಕು ಎಂದರೆ ಮತದಾರರ ಮನಸ್ಸು ವಿಶಾಲವಾಗಿರಬೇಕು’ ಎಂದು ಅವರು ಅನೇಕರಿಗೆ ಮನವರಿಕೆ ಮಾಡಿದ್ದಾರೆ. ಸಹಕಾರಿ ಕ್ಷೇತ್ರದ ಭವಿಷ್ಯ ಚಿಂತನೆಗಳನ್ನು ಅವರು ಮತದಾರರಿಗೆ ತಿಳಿಸಿ ಅವರ ಮನ ಗೆಲ್ಲುತ್ತಿದ್ದಾರೆ. 20 ವರ್ಷದ ಸಾಮಾಜಿಕ ಜೀವನದ ಜೊತೆ 11 ವರ್ಷದ ಸಹಕಾರಿ ರಂಗ ಸರಸ್ವತಿ ಎನ್ ರವಿ ಅವರ ಗೆಲುವು ಸುಲಭವಾಗಿಸುವ ಸಾಧ್ಯತೆಗಳಿವೆ.
`ಸೊಸೈಟಿಗಳಲ್ಲಿ ಸಾಲಪಡೆಯುವುದರಿಂದಹಿಡಿದು ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳವರೆಗೆ ಸಾವಿರಾರು ಸಮಸ್ಯೆಗಳಿವೆ. ಅಂಥ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲು ಕೆಡಿಸಿಸಿ ಬ್ಯಾಂಕಿಗೆ ಉತ್ತಮ ನಿರ್ದೇಶಕ ಮಂಡಳಿ ಅಗತ್ಯವಿದೆ. ಸರ್ವರ ಸಹಕಾರ ಬಯಸಿ ನಾನು ಕೆಡಿಸಿಸಿ ಬ್ಯಾಂಕಿನ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಇಷ್ಟು ವರ್ಷಗಳ ಕಾಲ ನನ್ನನ್ನು ನೋಡಿದ ಮತದಾರರು ಈ ಚುನಾವಣೆ ಮೂಲಕ ಕೆಡಿಸಿಸಿ ಬ್ಯಾಂಕಿಗೆ ಮಹಿಳಾ ನಿರ್ದೇಶಕರನ್ನು ಆರಿಸುವ ವಿಶ್ವಾಸವಿದೆ’ ಎಂದು ಸರಸ್ವತಿ ಎನ್ ರವಿ ಅವರು ಪ್ರತಿಕ್ರಿಯಿಸಿದರು.
ಇದನ್ನೂ ಓದಿ : ಪ್ರವಾಸಿಗರಿಗೆ ಎದುರಾದ ಚಿರತೆ : ಕ್ಯಾಮರಾದಲ್ಲಿ ಸೆರೆ