ಸುದ್ದಿಬಿಂದು ಬ್ಯೂರೋ‌ ವರದಿ
ಹಳಿಯಾಳ : ಅಕ್ರಮವಾಗಿ ಹಾಗೂ ಅಮಾನುಷವಾಗಿ  ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ವಾಹನದ ಮೇಲೆ ಕಾರ್ಯಾಚರಣೆ ಮಾಡಿದ ಭಜರಂಗದಳ ಕಾರ್ಯಕರ್ತರು  ಆರೋಪಿಯನ್ನು ಹಿಡಿದು ಹಳಿಯಾಳ ಪೋಲಿಸರಿಗೆ ಒಪ್ಪಿಸಿದ್ದಾರೆ.

ಬೆಳಗಾವಿ ನೊಂದಣಿಯ ಬೊಲೆರೊ ವಾಹನ ಸಣ್ಣ ಜಾಗದಲ್ಲಿಯೇ ಎರಡು ಹೊರಿ ಮತ್ತು ಮೂರು ಎಮ್ಮೆಗಳನ್ನು ಅತ್ಯಂತ ಅಮಾನುಷ‌ ರೀತಿಯಲ್ಲಿ ಕಟ್ಟಿ ಹಾಕಿ ಅವುಗಳು ಕಾಣದಂತೆ ಹಲಗೆಯ ಪಾರ್ಟಿಷನ್ ಮಾಡಿ  ಅದರ ಮುಂದೆ ಹಣ್ಣಿನ ಕ್ರೇಟಗಳನ್ನು ಒಟ್ಟು ಮತ್ತೇ ಅದು ಕಾಣದಂತೆ ಪ್ಲಾಸ್ಟಿಕ್  ತಾಡಪತ್ರೆ ಮುಚ್ಚಿ ವ್ಯವಸ್ಥಿತವಾಗಿ ಕಸಾಯಿಖಾನೆಗೆ  ಅಕ್ರಮ ಸಾಗಾಟ ಮಾಡುತ್ತಿರುವುದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.

ಬಂಧಿತ ಆರೋಪಿ ಬೆಳಗಾವಿಯ ಗಂದಿಗವಾಡದ ತನ್ವೀರ ಬುಡೆಸಾಬ ಸಾಹೇಬಖಾನ(43) ಎನ್ನುವವನಾಗಿದ್ದು ಸಧ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಹಳಿಯಾಳ ಪೋಲಿಸರು  ಅಕ್ರಮವಾಗಿ ಸಾಗಿಸಲಾಗುತ್ತಿದ್ದ  ಜಾನುವಾರುಗಳನ್ನು ವಾಹನ ಸಮೇತ ಸುಪರ್ದಿಗೆ ಪಡೆದಿದ್ದಾರೆ.

ಬೆಳಗಾವಿಯಿಂದ ಮಂಗಳೂರಿಗೆ ಸಾಗಿಸಲಾಗುತ್ತಿತ್ತು ಎನ್ನಲಾಗಿರುವ ವಾಹನವನ್ನು ಹಳಿಯಾಳ ತಾಲೂಕಿನ ಹಳಿಯಾಳ ಯಲ್ಲಾಪೂರ ರಾಜ್ಯ ಹೆದ್ದಾರಿಯ ಮುತ್ತಲಮುರಿ ಗ್ರಾಮದ ಬಳಿ ಮುತ್ತಲಮುರಿ ಗ್ರಾಮದ ಭಜರಂಗದಳ ಘಟಕದ ಯುವಕರು ಕಾರ್ಯಾಚರಣೆ ನಡೆಸಿ ಅಕ್ರಮವನ್ನು ಬಯಲಿಗೆ ಎಳೆದಿದ್ದಾರೆ. ಭಜರಂಗದಳ ಯುವಕರು ತಕ್ಷಣ ವಿಷಯವನ್ನು ಹಳಿಯಾಳ ಪೋಲಿಸರಿಗೆ ತಿಳಿಸಿ  ವಾಹನ ಸಮೇತ ಆರೋಪಿಯನ್ನು ಪೋಲಿಸರಿಗೆ ಒಪ್ಪಿಸಿದರು.

ವಾಹನದಲ್ಲಿ ಮೂರು ಎಮ್ಮೆ ಮತ್ತು ಎರಡು ಹೊರಿ ಇದ್ದು  ಇವುಗಳನ್ನು ತಾಲೂಕಿನ ದುಸಗಿ ಗ್ರಾಮದಲ್ಲಿರುವ ಗೋಶಾಲೆಗೆ ರವಾನಿಸುವ ಸಿದ್ದತೆಯನ್ನು ಕಾನೂನಾತ್ಮಕವಾಗಿ ಪೋಲಿಸರು ಮಾಡುತ್ತಿದ್ದಾರೆ.‌ ವಿಷಯ ತಿಳಿಯುತ್ತಿದ್ದಂತೆ ಹಳಿಯಾಳ ಠಾಣೆಯ ಎದುರು ನೂರಾರು ಹಿಂದೂ ಕಾರ್ಯಕರ್ತರು ಜಮಾಯಿಸಿ ಅಕ್ರಮದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರಲ್ಲದೇ ವ್ಯಕ್ತಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.

ಇದನ್ನೂ ಓದಿ : ಉ.ಕ ಜಿಲ್ಲೆಯ ಈ ತಾಲೂಕಿನ ಶಾಲೆಗಳಿಗೆ ರಜೆ