ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಕಾರವಾರ–ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಮನೆಯ ಮೇಲೆ ಇಡಿ ಅಧಿಕಾರಿಗಳು ನಡೆಸಿದ ದಾಳಿ ಹಿಂದೆ ಪ್ರಭಾವಿ ನಾಯಕರೊಬ್ಬರ ಕೈವಾಡ ಅಡಗಿದೆ ಎನ್ನುವ ಮಾತು ಜಿಲ್ಲೆ ಹಾಗೂ ರಾಜ್ಯ ಕಾಂಗ್ರೆಸ್‌ ವಲಯದಲ್ಲೇ ಚರ್ಚೆಗೆ ಗ್ರಾಸವಾಗಿದೆ.

ಇನ್ನೂ ಎರಡು ತಿಂಗಳಲ್ಲಿ ಶಾಸಕ ಸತೀಶ್ ಸೈಲ್ ಅವರಿಗೆ ಮಂತ್ರಿಸ್ಥಾನ ಸಿಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿತ್ತು ಎನ್ನಲಾಗಿದೆ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿಯೂ ಸಹ ಮಾತುಕತೆ ನಡೆದು ಕೊನೆಯ ಹಂತಕ್ಕೆ ಬಂದಿತ್ತು ಎನ್ನಲಾಗಿದೆ. ಮಂತ್ರಿ ಸ್ಥಾನ ಜೊತೆಗೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿಯನ್ನೂ ಸೈಲ್ ಅವರಿಗೆ ನೀಡಿ, ಹಾಲಿ ಉಸ್ತುವಾರಿಯಾಗಿದ್ದ ಮಂಕಾಳ್ ವೈದ್ಯರನ್ನು ಉಡುಪಿ ಜಿಲ್ಲಾ ಉಸ್ತುವಾರಿಯನ್ನಾಗಿ ಮಾಡುವ ಬಗ್ಗೆ ತೀರ್ಮಾನಗಳು ನಡೆದಿದ್ದವು ಎಂಬುದು ಪಕ್ಷದೊಳಗಿನ ಎಲ್ಲಾ ನಾಯಕರಿಗೂ ತಿಳಿದ ವಿಚಾರ ಎನ್ನಲಾಗಿದೆ.

ಈ ನಡುವೆ ಶಾಸಕ ಸತೀಶ್ ಸೈಲ್ ತಮ್ಮ ಕೆಲ ಬೆಂಬಲಿಗರೊಂದಿಗೆ ದೆಹಲಿಗೆ ತೆರಳಿ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಶಾಸಕ ಸೈಲ್ ದೆಹಲಿಯಲ್ಲಿ ಬೆಂಬಲಿಗರ ಜೊತೆ ಇರುವಾಗಲೇ ಆ ಪ್ರಭಾವಿ ನಾಯಕ ಸಹ, ದೆಹಲಿಯಲ್ಲೆ ಇದ್ದ ಎನ್ನಲಾಗಿದೆ. ಅಲ್ಲೆ ಇದ್ದು ಸೈಲ್ ಅವರಿಗೆ ಮಂತ್ರಿ ಸ್ಥಾನ ಸಿಗದಂತೆ ಹೈಕಮಾಂಡ್ ಮುಂದೆ ಒತ್ತಡ ಹಾಕಲು ಮುಂದಾಗಿದ್ದನೆಂದು ಹೇಳಲಾಗುತ್ತಿದೆ. ಹೈಕಮಾಂಡ್ ಆಗಲೇ ಸೈಲ್ ಅವರಿಗೆ ಮಂತ್ರಿ ಸ್ಥಾನ ನೀಡಲು ತೀರ್ಮಾನ ಕೈಗೊಂಡಿತ್ತು ಎನ್ನಲಾಗುತ್ತಿದೆ.

ಹೀಗಾಗಿ ನಿರಾಶೆಗೊಂಡ ನಾಯಕ ಹೇಗಾದರೂ ಸೈಲ್ ಅವರಿಗೆ ಮಂತ್ರಿಗಿರಿ ತಪ್ಪಿಸಲೇಬೇಕು ಎಂಬ ಉದ್ದೇಶದಿಂದ, ದೆಹಲಿಯಲ್ಲಿದ್ದಾಗಲೇ ಕೇಂದ್ರ ಸಚಿವರೊಬ್ಬರ ಜೊತೆ ಸುದೀರ್ಘ ಮಾತುಕತೆ ನಡೆಸಿ, ಇಡಿ ದಾಳಿಯ ಮೂಲಕ ಸೈಲ್ ಮಂತ್ರಿಗಿರಿ ತಪ್ಪಿಸಲು ರಣತಂತ್ರ ಹೆಣೆದಿದ್ದಾನೆಂಬ ಸುದ್ದಿ ಜಿಲ್ಲಾ ಕಾಂಗ್ರೆಸ್ ಮಾತ್ರವಲ್ಲ, ರಾಜ್ಯ ಮಟ್ಟದಲ್ಲಿಯೂ ಚರ್ಚೆಗೆ ಕಾರಣವಾಗಿದೆ.

ಆದರೆ ಇದು ಶಾಸಕ ಸತೀಶ್ ಸೈಲ್ ಮನೆ ಮೇಲೆ ಆಗಿರುವ ದಾಳಿಯನ್ನು ಬೇರೊಬ್ಬರ ಮೇಲೆ ತೂರಿಬಿಡುವ ಚರ್ಚೆಯೋ ಅಥವಾ ನಿಜವಾಗಿಯೂ ಮಂತ್ರಿಗಿರಿ ತಪ್ಪಿಸುವ ಹುನ್ನಾರವೋ ಎಂಬುದು, ಕೇಂದ್ರಮಂತ್ರಿಯ ಜೊತೆ ರಣತಂತ್ರ ಹೆಣೆದಿರುವ ಆ ಪ್ರಭಾವಿ ನಾಯಕನಿಗೂ, ಸೈಲ್ ಬೆಂಬಲಿಗರಿಗೂ ಮನಸ್ಸಿನ ಆಳದಲ್ಲಿ ಗೊತ್ತಿರುವ ವಿಚಾರ.”ಬೆಂಕಿ ಇಲ್ಲದೆ ಹೊಗೆ ಅಡುವುದಿಲ್ಲ” ಎನ್ನುವ ಮಾತು ಎಲ್ಲರಿಗೂ ಗೊತ್ತಿರುವ ಸತ್ಯ. ರಾಜಕೀಯ ಎಂದ ಮೇಲೆ ಇಂತಹ ಆಟಗಳು ಸರ್ವೆ ಸಾಮಾನ್ಯ.

ಇದನ್ನೂ ಓದಿ: ಶಿರಸಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆ