ಸುದ್ದಿಬಿಂದು ಬ್ಯೂರೋ ವರದಿ
Karwar:ಕಾರವಾರ :ರಾಷ್ಟ್ರ ಹಾಗೂ ರಾಜ್ಯದಲ್ಲಿ ಬಿಜೆಪಿ(Bjp) ಮತ್ತು ಜೆಡಿಎಸ್ ಕೈ ಜೋಡಿಸಿ ಮೈತ್ರಿ ಬೆಳೆಸಿಕೊಂಡು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಸೇರಿ ಬಿಜೆಪಿಯ ನಾಯಕರು ಜೆಡಿಎಸ್ (jds) ಜೊತೆ ಸಖ್ಯ ಬೆಳೆಸಿ ರಾಜಕೀಯ ನಡೆಸುತ್ತಿದ್ದರೆ ಇತ್ತ ಕಾರವಾರ ನಗರಸಭೆಯಲ್ಲಿ ನಾಲ್ವರು ಜೆಡಿಎಸ್ ಸದಸ್ಯರ ಬೆಂಬಲದಿಂದ ಬಿಜೆಪಿ ಅಧಿಕಾರಕ್ಕೇರಿದೆ.ಈ ನಡುವೆ ಕಾರವಾರದ ಮಾಜಿ ಶಾಸಕಿ ನೀಡಿರುವ ಜೆಡಿಎಸ್ ದುರ್ಬಲ ಎಂಬ ಹೇಳಿಕೆ ರಾಜಕೀಯವಾಗಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಇನ್ನು ಜೆಡಿಎಸ್ ಬೆಂಬಲದೊಂದಿಗೆ ಕಾರವಾರ ನಗರಸಭೆಯಲ್ಲಿ ಅಧಿಕಾರ ಹಿಡಿದ ಬಿಜೆಪಿ ಈಗ ಜೆಡಿಎಸ್ ವಿರುದ್ಧ ಮನಸ್ಸೋ ಇಚ್ಛೆ ವಾಗ್ದಾಳಿ ನಡೆಸಿ ಹೀಯಾಳಿಸಿದ್ದು, ಜೆಡಿಎಸ್ ಪಕ್ಷದ ಜಿಲ್ಲಾ ನಾಯಕರಿಂದ ಹಿಡಿದು ರಾಜ್ಯದ ನಾಯಕರು ಒಳಗೊಳಗೆ ಕೆಂಡಾಮಂಡಲರಾಗಿದ್ದಾರೆ ಎನ್ನಲಾಗುತ್ತಿದೆ. ಕಾರವಾರ ನಗರಸಭೆ ಒಟ್ಟು 31 ಸದಸ್ಯರ ಬಲ ಹೊಂದಿದ್ದು, ಅದರಲ್ಲಿ ಬಿಜೆಪಿಯ ಹನ್ನೊಂದು ಹಾಗೂ ಕಾಂಗ್ರೆಸ್ಸಿನ 11, ಜೆಡಿಎಸ್ ಪಕ್ಷದ 4 ಸದಸ್ಯರೊಂದಿಗೆ ಐದು ಮಂದಿ ಪಕ್ಷೇತರ ಸದಸ್ಯರು ಸೇರಿ ಒಟ್ಟು 31ಸದಸ್ಯರಿದ್ದಾರೆ.
ಈ ನಡುವೆ ಎರಡನೇ ಅವಧಿಯಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್(Congress)ಹಾಗೂ ಬಿಜೆಪಿ ಈ ಎರಡು ಪಕ್ಷಕ್ಕೂ ಪಕ್ಷೇತರ ಸದಸ್ಯರೊಂದಿಗೆ ಜೆಡಿಎಸ್ ಪಕ್ಷದ ನಾಲ್ವರು ಸದ್ಯರ ಬೆಂಬಲ ಅನಿವಾರ್ಯವಾಗಿತ್ತು. ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಕಾರವಾರ ನಗರಸಭೆ ಅಧಿಕಾರ ಹಿಡಿಯಲು ಬಿಜೆಪಿಗೆ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲೇ ಬೇಕಿತ್ತು. ಈ ಕಾರಣಕ್ಕಾಗಿ ಎರಡು ಪಕ್ಷದ ನಾಯಕರು ಮಾತುಕತೆ ನಡೆಸಿ ಜೆಡಿಎಸ್ ಅಭ್ಯರ್ಥಿ ಉಪಾಧ್ಯಕ್ಷ ಹಾಗೂ ಬಿಜೆಪಿ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ ಹಂಚಿಕೊಳ್ಳುವ ಮೂಲಕ ಮೈತ್ರಿಯಾಗಿದೆ.
ವಾಸ್ತವ ಹೀಗಿರುವಾಗ ಇತ್ತೀಚೆಗೆ ಬಿಜೆಪಿಯ ಮಾಜಿ ಶಾಸಕಿ ಜೆಡಿಎಸ್ ಪಕ್ಷದ ಸಾಮರ್ಥ್ಯದ ಬಗ್ಗೆ ಕೀಳಾಗಿ ಮಾತನಾಡಿರುವುದು ಸದ್ಯ ಜೆಡಿಎಸ್ ರಾಜ್ಯ ನಾಯಕರ ಅಂಗಳಕ್ಕೂ ತಲುಪಿದೆ ಎಂದು ಜೆಡಿಎಸ್ ಉನ್ನತ ಮೂಲಗಳು ತಿಳಿಸಿವೆ. ರಾಜಕೀಯವಾಗಿ ಇದು ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ತಪ್ಪದೆ ಓದಿ