ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ನಗರದ ನಂದನಗದ್ದಾ ಬಳಿ ಶನಿವಾರ ಸಂಜೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಮನೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಸ್ಥಳೀಯ ಶಾಂತಾರಾಮ ದತ್ತ ದೇಸಾಯಿ ಅವರ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಹಾನಿ ಉಂಟಾಗಿದೆ.
ಮನೆಯಲ್ಲಿ ದೇವರಿಗೆ ಹಚ್ಚಿದ್ದ ದೀಪವೇ ಬೆಂಕಿ ಅವಘಡಕ್ಕೆ ಕಾರಣ ಎನ್ನಲಾಗಿದೆ. ಶಾಂತಾರಾಮ ದೇಸಾಯಿ ಅವರು ದೇವರಿಗೆ ದೀಪ ಹಚ್ಚಿ ಅಂಗಡಿಗೆ ತೆರಳಿದ್ದ ವೇಳೆ, ದೀಪದ ಬೆಂಕಿ ಹಂಚಿನ ಮನೆಯಲ್ಲಿ ಹೊತ್ತಿಕೊಂಡಿದೆ . ಮರದ ಕಟ್ಟಡವಾಗಿದ್ದ ಕಾರಣ ಕ್ಷಣ ಮಾತ್ರದಲ್ಲಿ ಬೆಂಕಿ ಜ್ವಾಲೆಗಳು ವ್ಯಾಪಕವಾಗಿ ಹರಡಿದ್ದು. ಅದೃಷ್ಟವಶಾತ್, ಬೆಂಕಿ ಹೊತ್ತಿಕೊಂಡಾಗ ಮನೆಯಲ್ಲಿ ಯಾರೂ ಇರಲಿಲ್ಲವಾದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯನ್ನು ಗಮನಿಸಿದ ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು. ಕಾರವಾರ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಅರ್ಧಗಂಟೆಗೂ ಹೆಚ್ಚು ಕಾಲ ನಡೆದ ಕಾರ್ಯಾಚರಣೆಯ ನಂತರ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಕಿಯಿಂದ ಮನೆಯ ಪೀಠೋಪಕರಣಗಳು, ಬಟ್ಟೆಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಮಹಾಬಲೇಶ್ವ ಗೌಡ, ಸಿಬ್ಬಂದಿ ರಾಜೇಶ ರಾಣೆ, ಸುನೀಲ ಕುಮಾರ, ಪ್ರವೀಣ ನಾಯ್ಕ, ವಸಂತ ದೇವಾಡಿಗ, ಸುನೀಲ ನಾಯ್ಕ, ಟೋನಿ ಬಾರ್ಬೋಸಾ ಹಾಗೂ ಅರುಣ ಅವರು ಪಾಲ್ಗೊಂಡಿದ್ದರು. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.