ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಮಾಧ್ಯಮಶ್ರೀ’ ಪ್ರಶಸ್ತಿಗೆ ವಿಶ್ವವಾಣಿ ಹಾಗೂ ದೂರದರ್ಶನ ವರದಿಗಾರ್ತಿ ವಿನುತಾ ಹೆಗಡೆ ಅವರನ್ನು ಆಯ್ಕೆ ಮಾಡಲಾಗಿದೆ.
ಇಲ್ಲಿನ ಪತ್ರಿಕಾ ಭವನದಲ್ಲಿ ತಾಲೂಕಾ ಅಧ್ಯಕ್ಷ ಸಂದೇಶ ಭಟ್ ಬೆಳಖಂಡ ನೇತೃತ್ವದಲ್ಲಿ ನಡೆದ ಕಾರ್ಯಕಾರಣಿ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಯಿತು.2006ರಿಂದ ಪತ್ರಿಕೋದ್ಯಮ ಕ್ಷೇತ್ರಕ್ಕೆ ಕಾಲಿಟ್ಟ ವಿನುತಾ ಹೆಗಡೆ ಅವರು ಯಲ್ಲಾಪುರ ತಾಲೂಕಿನ ಹಿಂದುಳಿದ ಗ್ರಾಮವಾದ ಭಾಗಿನಕಟ್ಟಾದಲ್ಲಿ 1979ರಲ್ಲಿ ಜನಿಸಿದ್ದು,ಹೈಸ್ಕೂಲ್ ವಿದ್ಯಾಭ್ಯಾಸವನ್ನು 14 ಕಿಲೋಮೀಟರ್ ದೂರ ನಡೆದು ಪೂರೈಸಿದ್ದಾರೆ.
ಮದುವೆಯ ನಂತರ ಧಾರವಾಡದ ಜೆಎಸ್‌ಎಸ್ ಕಾಲೇಜಿನಲ್ಲಿ ಬಿ.ಎ. ಹಾಗೂ ಪತ್ರಿಕೋದ್ಯಮದಲ್ಲಿ ಎಂ.ಎ. ಪದವಿಯನ್ನು ಪಡೆದಿದ್ದಾರೆ.ಹೊಸದಿಗಂತ ಜನಮಾಧ್ಯಮ ಪತ್ರಿಕೆಯಲ್ಲಿ ತಮ್ಮ ವೃತ್ತಿ ಆರಂಭಿಸಿದ್ದು, ಕಡಲವಾಣಿ ವರದಿಗಾರಿಕೆ ಹಾಗೂ ಸಂಪಾದಕೀಯ ಕಾರ್ಯಗಳನ್ನು ನಿರ್ವಹಿಸಿದ್ದಾರೆ. 2008-09ರಲ್ಲಿ ಧ್ಯೇಯನಿಷ್ಠ ಪತ್ರಕರ್ತೆಯಾಗಿ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದು, ಕೈಗಾ ಅಣುಸ್ಥಾವರದ ವಿಕಿರಣದಿಂದ ಉಂಟಾಗುವ ಕ್ಯಾನ್ಸರ್ ಕುರಿತ ಸರಣಿ ಲೇಖನಗಳು ದೇಶವ್ಯಾಪಿ ಸಂಚಲನ ಮೂಡಿಸಿತ್ತು.
ನಂತರ ಹುಬ್ಬಳ್ಳಿ-ಧಾರವಾಡದಲ್ಲಿ ಹೊಸದಿಗಂತ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸಿದ ಇವರು, 2014ರಿಂದ ಕನ್ನಡ ಪ್ರಭ ಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಹಾಗೂ ಬಳಿಕ ವಿಶ್ವವಾಣಿ ದಿನಪತ್ರಿಕೆಯಲ್ಲಿ ಹಿರಿಯ ಉಪ ಸಂಪಾದಕರಾಗಿ ಐದು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ.ಕಳೆದ ಆರು ಏಳು ವರ್ಷಗಳಿಂದ ಚಂದನ ವಾಹಿನಿಯಲ್ಲಿ ದೂರದರ್ಶನ ವರದಿಗಾರ್ತಿಯಾಗಿ ಮತ್ತು ವಿಶ್ವವಾಣಿ ಪತ್ರಿಕೆಯ ಜಿಲ್ಲಾ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಮಧ್ಯದಲ್ಲಿ ಎರಡು ವರ್ಷಗಳ ಕಾಲ ಲೋಕಧ್ವನಿ ಸುದ್ದಿ ಸಂಪಾದಕಿಯಾಗಿ ಹಾಗೂ ವಿಶ್ವವಾಣಿಯ ಸ್ಥಳೀಯ ಸಂಪಾದಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಅನೇಕ ಪ್ರಶಸ್ತಿ-ಸನ್ಮಾನಗಳಿಗೆ ಪಾತ್ರರಾದ ಇವರು ‘ಕಂಡಿದ್ದು ಕಾಡಿದ್ದು’ ಅಂಕಣ ಬರೆಯುತ್ತಿದ್ದು, ಅವರ ಕಥೆ, ಕವನಗಳು ವಿವಿಧ ಪತ್ರಿಕೆಗಳು ಹಾಗೂ ಆಕಾಶವಾಣಿಯಲ್ಲಿ ಪ್ರಸಾರಗೊಂಡಿವೆ. ಇವರ ಪುತ್ರಿ ದೆಹಲಿಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾಳೆ. ಹಳ್ಳಿಯಿಂದ ದೆಹಲಿಯವರೆಗಿನ ಈ ಪ್ರಗತಿಪಥದಲ್ಲಿ ಅವರು ತೋರಿದ ದೃಢತೆ ಹಾಗೂ ತಪಸ್ಸು, ಮಾಧ್ಯಮ ಕ್ಷೇತ್ರದಲ್ಲಿ ಹೆಮ್ಮೆಯ ಸಾಧನೆಯಾಗಿ ಪರಿಗಣಿಸಲಾಗಿದೆ. ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿನುತಾ ಹೆಗಡೆ ಅವರನ್ನು ಗೌರವಿಸಲಾಗುತ್ತದೆ ಎಂದು ತಾಲೂಕಾ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಕೆರೆಗದ್ದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಗೋವಾದಲ್ಲಿ ಜೂಜಾಟ ದಾಳಿ: ಉತ್ತರ ಕನ್ನಡದ 40 ಮಂದಿ ಬಂಧನ