ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಕಂಠಪೂರ್ತಿ ಮದ್ಯ ಸೇವಿಸಿ ಬಸ್ ಗೆ ಏರಿದ ವ್ಯಕ್ತಿ ಓರ್ವ ಸಹ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ನಡೆದುಕೊಂಡು, ಜೋರಾಗಿ ಕೂಗಿ ಗದ್ದಲ ಸೃಷ್ಟಿಸಿದ ಘಟನೆ ಕಾರವಾರ ಅಂಕೋಲಾ ಮಾರ್ಗದ KA 31 1401 ಬಸ್ ನಲ್ಲಿ ಅರ್ಗಾ ಬಳಿ ಬುಧವಾರ ರಾತ್ರಿ ಸುಮಾರು 9 ಗಂಟೆಗೆ ನಡೆದಿದೆ.
ಪ್ರಯಾಣಿಕರ ಮಾಹಿತಿ ಪ್ರಕಾರ ಈ ವ್ಯಕ್ತಿ ಬಸ್ ನಲ್ಲಿ ಇದ್ದ ಗೃಹರಕ್ಷಕ ಮಹಿಳಾ ಸಿಬ್ಬಂದಿಯೊಂದಿಗೆ ಸಹ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಸಹ ಪ್ರಯಾಣಿಕರು ಮತ್ತು ಸಿಬ್ಬಂದಿ ಸುಮ್ಮನಿರುವಂತೆ ಸೂಚಿಸಿದ್ದರು ಎನ್ನಲಾಗಿದೆ. ಇದಕ್ಕೆ ಅವರ ಮೇಲೆಯೂ ಕೈ ತೋರಿಸಿ ಬೆದರಿಕೆ ಮೂಡಿಸಿದ ವ್ಯಕ್ತಿ, ಬಸ್ ನಿರ್ವಾಹಕರ ಮೇಲೂ ಎಗರಿ ಬಿದ್ದು ಗಲಾಟೆ ಮಾಡಿದ್ದಾನೆ.
ವಿಡಿಯೋದಲ್ಲಿ ಈ ವ್ಯಕ್ತಿ ತಾನು ಪೋಸ್ಟ್ ಚೆಂಡಿಯಾ ಗ್ರಾಮದವನ್ನು ಎಂದು ತಾನೇ ಹೇಳಿಕೊಂಡಿದ್ದಾನೆ ಎನ್ನಲಾಗಿದ್ದು, ಕಾರವಾರದಲ್ಲಿ ಹಣ್ಣಿನ ವ್ಯಾಪಾರಿ ಎಂದು ತಿಳಿದು ಬಂದಿದೆ. ಈತ ಪ್ರತೀ ಬಾರಿಯೂ ಬಸ್ ನಲ್ಲಿ ಕುಡಿದು ಬಂದು ಇದೆ ರೀತಿ ತೊಂದರೆ ಕೊಡುತ್ತಿರುತ್ತಾನೆಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಬಳಿಕ ಮಹಿಳಾ ಪ್ರಯಾಣಿಕರು “ಇಂತಹ ಪರಿಸ್ಥಿತಿಯಲ್ಲಿ ರಾತ್ರಿ ಸಮಯದಲ್ಲಿ ಬಸ್ ನಲ್ಲಿ ಪ್ರಯಾಣಿಸಲು ಭಯವಾಗುತ್ತದೆ” ಎಂದು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ಬಸ್ ಸಿಬ್ಬಂದಿ ಹಾಗೂ ಪ್ರಯಾಣಿಕರು ಈ ವ್ಯಕ್ತಿಯ ವರ್ತನೆಗೆ ಅಸಹಾಯಕರಾಗುವಂತಾಗಿದೆ. ಈ ಸಂಬಂಧ ಸ್ಥಳೀಯ ಪೊಲೀಸರು ಹಾಗೂ ಸಾರಿಗೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕೇಣಿ ಖಾಸಗಿ ಬಂದರು ಮೂಲಕ ಅಭಿವೃದ್ಧಿ ಗುರಿ : ಮೀನುಗಾರರಿಗೆ ಭದ್ರತಾ ಭರವಸೆ